ADVERTISEMENT

ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ: ಸಚಿವ ಡಾ.ಕೆ.ಸುಧಾಕರ್‌

ಈವರೆಗೆ 4,000 ಕ್ಕೂ ಹೆಚ್ಚು ವೈದ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 18:44 IST
Last Updated 28 ಜೂನ್ 2021, 18:44 IST
ಡಾ. ಸುಧಾಕರ್‌
ಡಾ. ಸುಧಾಕರ್‌   

ಬೆಂಗಳೂರು: ಎಂಬಿಬಿಎಸ್‌ ಪದವೀಧರರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಸುವ ವ್ಯವಸ್ಥೆ ಜಾರಿಯಾಗಿದ್ದು, ಈ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಿಗೆ ಒಟ್ಟು 2,053 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೊಂದು ಐತಿಹಾಸಿಕ ನೇಮಕಾತಿ ಪ್ರಕ್ರಿಯೆ. ಇತ್ತೀಚೆಗೆ 1,750 ವೈದ್ಯರ ನೇರ ನೇಮಕಾತಿ ನಡೆದಿದೆ. ಇದಲ್ಲದೆ, ಕೊರೊನಾ ಸಂದರ್ಭದಲ್ಲಿ ಒಟ್ಟು 4 ಸಾವಿರ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ ಎಂದರು.

ಎಂಬಿಬಿಎಸ್‌ ಪದವೀಧರರು ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯ ಒಂದು ವರ್ಷ ಸೇವೆ ಸಲ್ಲಿಸುವ ನಿಯಮ ಜಾರಿ ಬಂದಿರುವುದರಿಂದ 1,001 ವೈದ್ಯರನ್ನು 18 ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಗುತ್ತಿಗೆ ನೇಮಕ ಮಾಡಲಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಐಸಿಯುನಲ್ಲಿ ಕೆಲಸ ಮಾಡಲು 666 ವೈದ್ಯರನ್ನು ನೇಮಕ ಮಾಡಲಾಗಿದೆ. ಜೂನ್‌ 30 ರೊಳಗೆ ಅವರೆಲ್ಲರೂ ಸ್ಥಳಕ್ಕೆ ಹೋಗಿ ಕೆಲಸ ಆರಂಭಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 348 ವೈದ್ಯರ ಹುದ್ದೆ ತುಂಬಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 90, ನೆಫ್ರೋ ಯುರಾಲಜಿಯಲ್ಲಿ 3 ವೈದ್ಯರನ್ನು ನೇಮಿಸಲಾಗಿದೆ. ಒಟ್ಟು 2,108 ಖಾಲಿ ಹುದ್ದೆಗಳು ಇದ್ದು, 2,053 ವೈದ್ಯರೂ ನೇಮಕಗೊಂಡಿದ್ದಾರೆ ಎಂದು ಹೇಳಿದರು.

ಶೇ 95 ರಷ್ಟು ಗುಣಮುಖರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರಲ್ಲಿ ಶೇ 95 ರಷ್ಟು ಮಂದಿ ಗುಣಮುಖರಾಗಿದ್ದಾರೆ. ದೃಢಪ್ರಮಾಣ ದರ ಶೇ 2.62 ರಷ್ಟಿದೆ. ಕೊಡಗು, ಮೈಸೂರು, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ದೃಢಪ್ರಮಾಣ ದರ ಶೇ 5 ಕ್ಕಿಂತ ಅಧಿಕವಾಗಿದೆ. ನಿತ್ಯ ಸುಮಾರು 1.5 ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಲಸಿಕೆ
‘ರಾಜ್ಯದಲ್ಲಿ 24.37 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿದ್ದೇವೆ’ ಎಂದು ಡಾ.ಸುಧಾಕರ್‌ ತಿಳಿಸಿದರು.

‘ಹತ್ತು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಚಿಂತನೆ ನಡೆಸಿದ್ದೇವೆ. ಲಸಿಕೆ ಪ್ರಮಾಣ ಬಹಳ ಕಡಿಮೆ ಇದೆ. ಇನ್ನೆರಡು ದಿನಗಳಲ್ಲಿ ದೆಹಲಿಗೆ ಭೇಟಿ ನೀಡಿ, ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡುತ್ತೇನೆ’ ಎಂದರು.

***

2 ಡಿಜಿ ಔಷಧಿ ಖರೀದಿಸಲು ತಜ್ಞರು ಸಲಹೆ ನೀಡಿದ್ದಾರೆ. ಮೂರನೇ ಅಲೆ ಬರುವುದಕ್ಕೆ ಮುನ್ನವೇ ಈ ಔಷಧಿ ಖರೀದಿಸಲಾಗುವುದು.
-ಡಾ. ಕೆ. ಸುಧಾಕರ್, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.