
ಅತಿಥಿ ಉಪನ್ಯಾಸಕ
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಯುಜಿಸಿ ವಿದ್ಯಾರ್ಹತೆ ಇರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಂಗವಿಕಲ ಅಭ್ಯರ್ಥಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ.
ವಿವಿಧ ಅರ್ಹತೆಗಳಿಗೆ ನೀಡುವ ಕೃಪಾಂಕ ಪರಿಗಣಿಸದೆ ಅರ್ಜಿ ಸಲ್ಲಿಸಿದ ಎಲ್ಲ ಅಂಗವಿಕಲ ಅಭ್ಯರ್ಥಿಗಳನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ. ಬಹುತೇಕ ಅಭ್ಯರ್ಥಿಗಳು ಅಂಗವಿಕಲ ಪ್ರಮಾಣಪತ್ರಗಳನ್ನು ಸಲ್ಲಿಸಿ, ಆ ಕೋಟಾದ ಅಡಿ ಸ್ಥಾನ ಪಡೆಯಲು ಪೈಪೋಟಿಗೆ ಇಳಿದಿದ್ದಾರೆ.
ಅತ್ಯಂತ ಕಡಿಮೆ ಗೌರವಧನಕ್ಕೆ ಎರಡು ದಶಕಗಳಿಂದ ಕೆಲಸ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವುದಕ್ಕಾಗಿ ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ಅನುಭವದ ಆಧಾರದಲ್ಲಿ ಕೃಪಾಂಕಗಳನ್ನು ನಿಗದಿ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಕೆಲ ವರ್ಷಗಳ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು. ಆಯಾ ವಿಷಯಗಳಿಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿಯಲ್ಲಿ ಪಡೆದ ಶೇಕಡವಾರು ಅಂಕಗಳಲ್ಲಿ ಶೇ 25 ನಿಗದಿ ಮಾಡಲಾಗಿದೆ (ಒಬ್ಬ ಅಭ್ಯರ್ಥಿ ಶೇ 60 ಅಂಕ ಪಡೆದಿದ್ದರೆ ಅದನ್ನು 15 ಅಂಕಗಳು ಎಂದು ಪರಿಗಣಿಸಲಾಗುತ್ತದೆ). ಪಿಎಚ್.ಡಿ, ನೀಟ್, ಎಂ.ಫಿಎಲ್ ಪದವಿಗಳಿಗೆ 27 ಅಂಕಗಳು ಹಾಗೂ ಪ್ರತಿ ವರ್ಷದ ಸೇವಾನುಭವಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳನ್ನು ನಿಗದಿ ಮಾಡಲಾಗಿದೆ.
‘ಶೈಕ್ಷಣಿಕ ಅರ್ಹತೆ ಹಾಗೂ ಕೆಲಸದ ಅನುಭವದ ಅಂಕಗಳ ಜತೆಗೆ, ಅಭ್ಯರ್ಥಿ ಅಂಗವಿಕಲರಾಗಿದ್ದರೆ ಹೆಚ್ಚುವರಿ 10 ಅಂಕಗಳನ್ನು ನೀಡಲಾಗುತ್ತದೆ. ಈ ಎಲ್ಲ ಅಂಕಗಳನ್ನೂ ಸೇರಿಸಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿ ಕಾಲೇಜು ಶಿಕ್ಷಣ ಇಲಾಖೆ ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ಅನುಭವ ಬದಿಗಿಟ್ಟು, ಅಂಗವಿಕಲ ಪ್ರಮಾಣಪತ್ರ ಇದ್ದ ಎಲ್ಲರಿಗೂ ಮೊದಲ ಸುತ್ತಿನಲ್ಲೇ ಸ್ಥಳ ಆಯ್ಕೆಯ ಅವಕಾಶ ನೀಡಿದೆ. ಈ ಅವಕಾಶದ ದುರ್ಬಳಕೆ ಮಾಡಿಕೊಂಡ ಹಲವರು ನಕಲಿ ಪ್ರಮಾಣಪತ್ರ ಪಡೆದು ಆಯ್ಕೆಯಾಗುತ್ತಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ಇದ್ದ ಒಂದು ಎರಡು ಖಾಲಿ ಹುದ್ದೆಗಳಿಗೆ ಅಂಗವಿಕಲರನ್ನೇ ತುಂಬಲಾಗಿದೆ. ಇದು ಅನ್ಯಾಯದ ಪರಮಾವಧಿ’ ಎನ್ನುತ್ತಾರೆ ಅತಿಥಿ ಉಪನ್ಯಾಸಕ ಆರ್.ಎಂ.ಪಾಟೀಲ.
‘ಕಳೆದ ಕೆಲ ವರ್ಷಗಳಿಂದ ಈಚೆಗೆ ಪಿಎಚ್.ಡಿ ಪಡೆದವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅವುಗಳಲ್ಲಿ ಶೇ 70ರಷ್ಟು ಹೊರ ರಾಜ್ಯಗಳಿಂದ ಪಡೆದ ನಕಲಿ ಪಿಎಚ್.ಡಿಗಳಾಗಿವೆ. ಈಗ ನಕಲಿ ಅಂಗವಿಕಲರ ಪ್ರಮಾಣಪತ್ರದ ಹಾವಳಿ ಆರಂಭವಾಗಿದೆ. ಇದು ತಾತ್ಕಾಲಿಕ ನೇಮಕಾತಿಯಾದ ಕಾರಣ ಇಲಾಖೆ ಅವುಗಳ ಅಸಲೀತನ ಖಚಿತಪಡಿಸಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ’ ಎಂದು ಆರೋಪಿಸುತ್ತಾರೆ ಉಪನ್ಯಾಸಕಿ ರಶ್ಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.