ADVERTISEMENT

ಪ್ರತಿಮೆಗಳಿಗೆ ಅಪಮಾನ ಮಾಡಿದವರು ಮಾನಸಿಕ ರೋಗಿಗಳು: ಆರಗ ಜ್ಞಾನೇಂದ್ರ

ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆಗಳಿಗೆ, ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಅಪಮಾನ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 4:52 IST
Last Updated 21 ಡಿಸೆಂಬರ್ 2021, 4:52 IST
ಗೃಹ ಸಚಿವ ಆರಗ ಜ್ಞಾನೇಂದ್ರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪೂಜೆ ಮಾಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪೂಜೆ ಮಾಡಿದರು.   

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳು ಹಾಗೂ ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಅಪಮಾನ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಹಾಗೂ ಗಡಿಪಾರು ಮಾಡಲು ಚರ್ಚೆ ನಡೆಸುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿ ಮರು ಪ್ರತಿಷ್ಠಾಪಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಂಗಳವಾರ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಇದು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ ವರ್ಷ. ಈ ವೇಳೆ ದೇಶಕ್ಕಾಗಿ ದುಡಿದ ಮಹನೀಯರನ್ನು ಆರಾಧಿಸಬೇಕು. ಆದರೆ, ಕೆಲವರು ಪ್ರತಿಮೆಗಳಿಗೆ ಅವಮಾನ ಮಾಡಿದ್ದಾರೆ. ಅವರು ಮಾನಸಿಕ ರೋಗಿಗಳು. ಈ ಅವವರೆಲ್ಲ ಚನ್ನಮ್ಮ ಹಾಗೂ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ವಂಶಕ್ಕೆ ಸೇರಿದವರು. ಅಂಥವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ADVERTISEMENT

ಈ ಘಟನೆ ಹಿಂದೆ ಕೆಲ ಸಂಘ-ಸಂಸ್ಥೆಗಳ ಸಂಚು ಇರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಕೈಗೊಂಡು ಅಂಥವರ ವಿರುದ್ಧವೂ ಕ್ರಮ ಜರುಗಿಸಲಾಗುವುದು.‌ ಇಂತಹ ಘಟನೆಗಳ ಹಿಂದಿರುವವರ ಮುಖವಾಡವನ್ನು ಕಳಚಲಾಗುವುದು ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರು ಹಾಗೂ ಬಸವಣ್ಣ ಒಂದೇ ಭಾಷೆ ಅಥವಾ ಜಾತಿಗೆ ಸೀಮಿತವಾಗಿಲ್ಲ. ಗಡಿಯಲ್ಲಿ ಕನ್ನಡಿಗರು-ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಅಂಥವರು ಮತ್ತೆ ತಲೆ ಎತ್ತದಂತೆ ಕ್ರಮ ಜರುಗಿಸುತ್ತೇವೆ. ನಗರದ ವಿವಿಧೆಡೆ ಕಲ್ಲುತೂರಾಟ ಹಾಗೂ ರಾಯಣ್ಣ ಪ್ರತಿಮೆ ಭಗ್ನ ಘಟನೆಗಳ ಸಂಬಂಧ 38 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಗಡಿಯಲ್ಲಿ ಕನ್ನಡಿಗರು-ಮರಾಠಿಗರು ಹಿತ ಕಾಪಾಡುವ ದೃಷ್ಟಿಯಿಂದ ಮಹಾರಾಷ್ಟ್ರದ ಗೃಹ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದ ಆರಗ, ಬಾವುಟ ಸುಡುವುದು, ಆಸ್ತಿ-ಪಾಸ್ತಿ ನಾಶ ಮಾಡುವುದು ಸರಿಯಲ್ಲ ಎಂದರು.

ಎಂಇಎಸ್ ನಿಷೇಧಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.