ADVERTISEMENT

ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 23:36 IST
Last Updated 25 ಸೆಪ್ಟೆಂಬರ್ 2023, 23:36 IST
ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಮಾರಕಗಳ ದತ್ತು ಯೋಜನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಸ್ಮಾರಕದ ಪ್ರತಿಕೃತಿ ಸ್ವಚ್ಛಗೊಳಿಸಿದರು.  
ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಮಾರಕಗಳ ದತ್ತು ಯೋಜನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಸ್ಮಾರಕದ ಪ್ರತಿಕೃತಿ ಸ್ವಚ್ಛಗೊಳಿಸಿದರು.     

ಬೆಂಗಳೂರು: ಸ್ಮಾರಕಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿರುವ ದತ್ತು ಯೋಜನೆಗೆ ಸ್ಪಂದಿಸಿರುವ ಹಲವು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೋಮವಾರ  ಒಪ್ಪಂದಕ್ಕೆ ಸಹಿ ಹಾಕಿದರು. 

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ ‘ನಮ್ಮ ಸ್ಮಾರಕ: ನಮ್ಮ ಪರಂಪರೆ, ನಮ್ಮ ಗುರುತು, ನಮ್ಮ ಹೆಮ್ಮೆ’ ಅಭಿಯಾನದ ಸಂವಾದ ಮತ್ತು ಡಿಜಿಟಲ್ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

ಹೊಯ್ಸಳರ ವಾಸ್ತುಶಿಲ್ಪದ ಸಮಗ್ರ ಭಾಗಗಳನ್ನು ‘ಇನ್‌ಟ್ಯಾಕ್‌ ಸಂಸ್ಥೆ’, ವೆಂಕಟಪ್ಪ ಚಿತ್ರಶಾಲೆಯ ನವೀಕರಣಕ್ಕೆ ‘ಬ್ರಿಗೇಡ್ ಸಂಸ್ಥೆ’, ಯೋಜನಾ ನಿರ್ವಹಣೆ ಘಟಕದ ಅಭಿವೃದ್ಧಿಗೆ ‘ಕಲ್ಕಿ ಸಂಸ್ಥೆ’ಗಳು ಸಮ್ಮತಿ ನೀಡಿದವು. ಸಂರಕ್ಷಣಾ ಸ್ಮಾರಕಗಳ ಯೋಜನೆಗೆ ಒಳಪಡಲು ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಇಲಾಖೆಯಿಂದ ಆಶಯಪತ್ರ ವಿತರಿಸಲಾಯಿತು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸ್ಮಾರಕಗಳ 3ಡಿ ಲೇಸರ್ ಸ್ಕ್ಯಾನಿಂಗ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು.

ADVERTISEMENT

ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆದರೆ ನಾಡಿನ ಸಾಂಸ್ಕೃತಿಕ‌ ಹಿರಿಮೆ ಹೆಚ್ಚುತ್ತದೆ. ಆರ್ಥಿಕತೆಗೆ ಚೈತನ್ಯ ಬರುತ್ತದೆ. ಸ್ಮಾರಕಗಳ ರಕ್ಷಣೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು ಎಂದರು.

ಶಕ್ತಿ ಯೋಜನೆಯಿಂದಾಗಿ ಸಾಮಾನ್ಯ ಮಹಿಳೆಯರೂ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. 60 ಲಕ್ಷ ಮಹಿಳೆಯರು ಯೋಜನೆ ಫಲವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ ಹಾಗೂ ಕಲ್ಕಿ ಫೌಂಡೇಶನ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.