ಬೆಂಗಳೂರಿನ ಪುರಭವನದಲ್ಲಿ ಬುಧವಾರ ನಡೆದ ‘ಜೈಹಿಂದ್’ ಮಾಜಿ ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮರಾದ ಯೋಧರ ಕುಟುಂಬಗಳಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರು: ರಾಜ್ಯದಲ್ಲಿ ಸೇನಾ ಕ್ಯಾಂಟೀನ್‌ಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೈನಿಕರ ನಮಿಸುವ ಉದ್ದೇಶದಿಂದ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಜೈ ಹಿಂದ್ ಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ನೆಲಸಿರುವ ನಿವೃತ್ತ ಸೈನಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಅವರ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
‘ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ. 140 ಕೋಟಿ ಭಾರತೀಯರ ಜವಾಬ್ದಾರಿ. ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿರುವ ಎಲ್ಲಾ ಮಾಜಿ ಯೋಧರಿಗೆ ನೆರವಾಗಲು ಪ್ರತ್ಯೇಕ ನಿಗಮ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ್ ಸಿಂಗ್ ಸುರ್ಜೇವಾಲ, ‘ಪಾಕಿಸ್ತಾನದ ವಿರುದ್ಧ ನಮ್ಮ ಪಡೆಗಳು ಮೇಲುಗೈ ಸಾಧಿಸಿದ್ದವು. ಅವರ ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದವು. ಅಲ್ಲಿನ ವಾಯುನೆಲೆಯನ್ನು ಧ್ವಂಸಗೊಳಿಸಿದ್ದವು. ಇಂತಹ ಮುನ್ನಡೆ ಸಾಧಿಸಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರವು ದಿಢೀರ್ ಎಂದು ಕದನ ವಿರಾಮ ಘೋಷಿಸಿತು. ಕದನ ವಿರಾಮದ ಅವಶ್ಯಕತೆ ಏನಿತ್ತು’ ಎಂದು ಪ್ರಶ್ನಿಸಿದರು.
‘ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದರು. ಆನಂತರ ಪಾಕಿಸ್ತಾನ ಘೋಷಿಸಿತು. ಅದಾದ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಈ ಬಗ್ಗೆ ಮಾಹಿತಿ ನೀಡಿದರು. ನಮ್ಮ ದೇಶದ ಪರವಾಗಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಅಥವಾ ಅದನ್ನು ಘೋಷಿಸಲು ಅಮೆರಿಕಕ್ಕೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.
ಕೆ.ಸಿ.ವೇಣುಗೋಪಾಲ್, ‘ಕದನ ವಿರಾಮ ಘೋಷಿಸುವ ಮೂಲಕ ನಮ್ಮ ಸೈನಿಕರ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡಿತು. ಕದನ ವಿರಾಮ ಘೋಷಣೆಯ ನಂತರ, ಅದರ ಷರತ್ತುಗಳ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದರು. ಸಭೆ ನಡೆಯಿತೇ ಅಥವಾ ಯಾವ ಷರತ್ತುಗಳನ್ನು ಹೇರಲಾಯಿತು ಎಂಬುದರ ಬಗ್ಗೆ ಸರ್ಕಾರ ಮಾಹಿತಿ ಏಕೆ ನೀಡುತ್ತಿಲ್ಲ’ ಎಂದೂ ಪ್ರಶ್ನಿಸಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಸೇನಾಧಿಕಾರಿಗಳು ಹಾಗೂ ಮಾಜಿ ಯೋಧರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇಶ ಸೇವೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳ ಸದಸ್ಯರನ್ನೂ ಸನ್ಮಾನಿಸಲಾಯಿತು.
‘ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ 1.76 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಹಲವು ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಇಂತಹ ಕೊರತೆಯ ಮಧ್ಯೆಯೂ ನಮ್ಮ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತು’ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು. ‘ಗಡಿಗಳಲ್ಲಿ ನಿಂತು ನಮ್ಮ ಸೈನಿಕರು ಹೋರಾಡುತ್ತಿರುವ ಕಾರಣದಿಂದಲೇ ನಾವು ನಮಗೆ ನೀಡಲಾಗಿರುವ ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.