ADVERTISEMENT

ಆಳುವವರಿಗೆ ಬೇಡವೇ ಬಡವರ ಬೋಗಿ?: ಶ್ರೀಸಾಮಾನ್ಯರ ಹೊರಗಿಡುವ ಯೋಜನೆಗಳಿಗೆ ಆದ್ಯತೆ

ಬಾಲಕೃಷ್ಣ ಪಿ.ಎಚ್‌
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
<div class="paragraphs"><p>ರೈಲಿನ ಸಾಮಾನ್ಯ ಬೋಗಿಯಲ್ಲಿ ಒಳಗೆ ಜಾಗವಿಲ್ಲದೇ ನೇತಾಡಿಕೊಂಡು ಹೋಗುತ್ತಿರುವ ಪ್ರಯಾಣಿಕರು</p></div>

ರೈಲಿನ ಸಾಮಾನ್ಯ ಬೋಗಿಯಲ್ಲಿ ಒಳಗೆ ಜಾಗವಿಲ್ಲದೇ ನೇತಾಡಿಕೊಂಡು ಹೋಗುತ್ತಿರುವ ಪ್ರಯಾಣಿಕರು

   

(ಸಂಗ್ರಹ ಚಿತ್ರ)

ಬೆಂಗಳೂರು: ಕಡಿಮೆ ದರದಲ್ಲಿ ಪ್ರಯಾಣಿಸುತ್ತಿದ್ದ ಬಡವರು, ಕಾರ್ಮಿಕರಿಗೆ ಅನುಕೂಲವಾಗಿದ್ದ ರೈಲುಗಳು ಈಗ ಬಡವರಿಂದ ದೂರವಾಗುತ್ತಿವೆ. ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಿದರೂ, ಹೊಸ ರೈಲುಗಳನ್ನು ಹಳಿಗಿಳಿಸಿದರೂ, ‘ಸಾಮಾನ್ಯ’ರು ಪ್ರಯಾಣಿಸುವ ಬೋಗಿಗಳ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ. ಹೆಚ್ಚುವುದು ಹೋಗಲಿ, ಇರುವ ಇಂತಹ ಬೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ADVERTISEMENT

‘ಮಾತಿನಲ್ಲಿ ನಮ್ಮ ಬಗ್ಗೆ ಅನುಕಂಪ ತೋರಿಸಿ, ಕಣ್ಣೀರು ಸುರಿಸಿ ಮತ ಪಡೆದು ಅಧಿಕಾರಕ್ಕೆ ಬರುವವರು, ಜನಸಾಮಾನ್ಯರ ಪ್ರಯಾಣ ಸೌಲಭ್ಯಕ್ಕಿಂತ ಸಿರಿವಂತರ ಯಾನಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವುದರತ್ತಲೇ ತಲೆ ಕೆಡಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ’ ಎಂದು ಸಾಮಾನ್ಯ ಬೋಗಿಗಳ ಪ್ರಯಾಣಿಕರು ದೂರುತ್ತಾರೆ. 

ಇತ್ತೀಚೆಗೆ ಪರಿಚಯಿಸಲಾದ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್ ರೈಲುಗಳ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಆರು ‘ವಂದೇ ಭಾರತ್‌’ ರೈಲುಗಳು ಸಂಚರಿಸುತ್ತಿವೆ. ಮಧ್ಯಮ ವರ್ಗ ಮತ್ತು ಶ್ರೀಮಂತರಿಗೆ ಈ ರೈಲು ಅಚ್ಚುಮೆಚ್ಚಿನದ್ದಾಗಿದೆ. ಎಂಟು ಕೋಚ್‌ಗಳ ಈ ರೈಲಿನಲ್ಲಿ 52 ಸೀಟುಗಳು ಎಕ್ಸಿಕ್ಯುಟಿವ್‌ ಮತ್ತು 478 ಸೀಟುಗಳು ಎ.ಸಿ ಚೇರ್‌ ಕಾರ್‌ ಆಗಿವೆ. ಇದರಲ್ಲಿ ‘ಸಾಮಾನ್ಯ ಬೋಗಿ’ ಎಂಬುದು ಇಲ್ಲ. ‘ವಂದೇ ಭಾರತ್‌’ನಲ್ಲಿ ಧಾರವಾಡದಿಂದ ಬೆಂಗಳೂರಿಗೆ ಎ.ಸಿ ಚೇರ್‌ ಕಾರ್‌ ಟಿಕೆಟ್‌ ದರ ₹1,350, ಎಕ್ಸಿಕ್ಯುಟಿವ್‌ ಕ್ಲಾಸ್‌ ದರ ₹2,460. ಬೇರೆ ರೈಲುಗಳಿಗಿಂತ ಅಧಿಕ ದರ ಹೊಂದಿರುವ ಈ ರೈಲಿನಲ್ಲಿ ಸಾಮಾನ್ಯರು ಪ್ರಯಾಣಿಸಲು ಸಾಧ್ಯವೇ ಎಂದು ಜನರು ಪ್ರಶ್ನಿಸುತ್ತಾರೆ.

‘ವಂದೇ ಭಾರತ್‌’ ಸದ್ಯ ಹಗಲಿನಲ್ಲಿ ಮಾತ್ರ ಸಂಚರಿಸುತ್ತಿದೆ. ಹಗಲಿನ 12 ಗಂಟೆ ಅವಧಿಯಲ್ಲಿ ಸಂಪರ್ಕಿಸಬಹುದಾದ ದೂರದ ನಗರಗಳಿಗೆ ಮಾತ್ರ ಈ ರೈಲು ಸಂಚರಿಸುತ್ತದೆ. ರಾತ್ರಿ ಸಂಚಾರ, ದೂರದ ಸ್ಥಳಗಳ ಸಂಚಾರಕ್ಕೆ ಅನುವಾಗುವಂತಹ ‘ವಂದೇ ಭಾರತ್‌’ ರೈಲುಗಳು ತಯಾರಾಗುತ್ತಿವೆ. ಆರು ತಿಂಗಳಲ್ಲಿ ಅವು ಕಾರ್ಯಾಚರಣೆ ಆರಂಭಿಸಲಿವೆ.

ಬೇರೆ ಎಕ್ಸ್‌ಪ್ರೆಸ್‌ ರೈಲುಗಳಲ್ಲಿರುವ ಸಾಮಾನ್ಯ ಬೋಗಿಗಳನ್ನು ಕಡಿತಗೊಳಿಸಲಾಗಿದೆ. ಬೆಂಗಳೂರು ಮೂಲಕ ಸಾಗುವ ಕೊಯಮತ್ತೂರು–ದೆಹಲಿ ಎಕ್ಸ್‌ಪ್ರೆಸ್‌ನಲ್ಲಿ ಹಿಂದೆ ಹವಾನಿಯಂತ್ರಣ ರಹಿತ 11 ಸ್ಲೀಪರ್‌ ಕೋಚ್‌ ಮತ್ತು ಜನರಲ್‌ ಬೋಗಿಗಳಿದ್ದವು. ಈಗ ಮೂರಕ್ಕೆ ಇಳಿಸಲಾಗಿದೆ. ಎ.ಸಿ ಕೋಚ್‌ಗಳನ್ನು ಹೆಚ್ಚಿಸಲಾಗಿದೆ. ಇದೇ ರೀತಿ ಹಲವು ರೈಲುಗಳಲ್ಲಿ ಸಾಮಾನ್ಯ ಬೋಗಿಗಳನ್ನು ಕಡಿತಗೊಳಿಸಲಾಗಿದೆ. ರೈಲಿನ ಮುಂಭಾಗದಲ್ಲಿ ಒಂದು ಮತ್ತು ಹಿಂಭಾಗದಲ್ಲಿ ಎರಡು ಬೋಗಿಗಳಷ್ಟೇ ಬಡವರ ಪಾಲಿಗೆ ಸಿಗುತ್ತಿವೆ.

‘ಆಧುನಿಕ ಸೌಲಭ್ಯಗಳನ್ನು ಹೊಂದಿರುವ ‘ವಂದೇ ಭಾರತ್‌’ ರೈಲುಗಳ ಸಂಚಾರ ಹೆಚ್ಚಿಸುವ ಗುರಿಯನ್ನು ರೈಲ್ವೆ ಸಚಿವರು ಇಟ್ಟುಕೊಂಡಿದ್ದಾರೆ. ಇದು ನಿಜವಾದರೆ, ಸಾಮಾನ್ಯ ಬೋಗಿಗಳೇ ಇಲ್ಲದ ರೈಲುಗಳು ಹೆಚ್ಚು ಓಡಾಡಲಿವೆ. ಬಡವರು ಈಗಲೇ ನೂಕುನುಗ್ಗಲಿನಲ್ಲಿ ಸಾಮಾನ್ಯ ಬೋಗಿಗಳಿಗೆ ಹತ್ತಲಾಗುತ್ತಿಲ್ಲ. ಮುಂದೆ ಕೆಂಪು ಬಸ್‌ಗಳಿಗಾಗಿ ಕಾಯುವ ಪರಿಸ್ಥಿತಿ ಬರಲಿದೆ’ ಎಂದು ಹಾವೇರಿಯ ರೈಲು ಪ್ರಯಾಣಿಕ ಎಂ. ಕರಿಬಸಪ್ಪ ಆತಂಕ ವ್ಯಕ್ತಪಡಿಸುತ್ತಾರೆ.

ಕಡಿಮೆ ಟಿಕೆಟ್‌ ದರ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಸಾಮಾನ್ಯ ಬೋಗಿಯ ದರ ₹ 140 ಇದ್ದರೆ, ಸ್ಲೀಪರ್‌ನಲ್ಲಿ ₹ 300 ಇದೆ. ಇವೆರಡೇ ಜನಸಾಮಾನ್ಯರು ಬಯಸುವ ಬೋಗಿಗಳು. ಏಕೆಂದರೆ 3 ಟೈರ್‌ ಎ.ಸಿ ಕೋಚ್‌ಗೆ ₹ 790, 2 ಟೈರ್‌ ಎ.ಸಿ ಕೋಚ್‌ಗೆ ₹ 1,100, ಫಸ್ಟ್‌ಕ್ಲಾಸ್‌ ಎ.ಸಿ ಕೋಚ್‌ಗೆ ₹ 1,840 ದರವಿರುವುದರಿಂದ ಬಡವರು ಈ ಬೋಗಿಗಳಲ್ಲಿ ಸಂಚರಿಸಲು ಬಯಸುವುದಿಲ್ಲ. ಇದೇ ರೀತಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ತೆರಳುವವರಿಗೂ ಬಹುತೇಕ ದರಗಳು ಇಷ್ಟೇ ಇವೆ. 

ಕಲಬುರಗಿ, ಮಂತ್ರಾಲಯ, ಮಂಗಳೂರು ಸಹಿತ ವಿವಿಧೆಡೆಗೆ ಸಂಚರಿಸುವ ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಜಾಗವಿಲ್ಲದೇ ಇದ್ದಾಗ ಕೆಲ ಪ್ರಯಾಣಿಕರು  ‌ಸೀಟು ಕಾಯ್ದಿರಿಸಿದ ಎರಡನೇ ದರ್ಜೆ ಸ್ಲೀಪರ್‌ ಕೋಚ್‌ ಸೇರಿದಂತೆ, ಎ.ಸಿ 3 ಟೈರ್‌, 2 ಟೈರ್‌, ಫಸ್ಟ್‌ ಕ್ಲಾಸ್‌ ಬೋಗಿಗಳಿಗೂ ನುಗ್ಗುತ್ತಾರೆ. ಇದರಿಂದ ಸೀಟು ಕಾಯ್ದಿರಿಸಿದವರು ತೊಂದರೆಗೆ ಸಿಲುಕುತ್ತಿದ್ದಾರೆ ಎಂಬ ದೂರೂ ಕೇಳಿ ಬರುತ್ತಿದೆ.

ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಲು ರೈಲ್ವೆ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳಿಗೂ ಈ ಬಗ್ಗೆ ಕಾಳಜಿ ಇಲ್ಲ ಎಂಬುದು ಪ್ರಯಾಣಿಕರ ದೂರು.

ಪ್ರಯಾಣವೇ ಪ್ರಯಾಸ

‘ನಾನು ಹುಬ್ಬಳ್ಳಿ– ಬೆಂಗಳೂರು ನಡುವೆ ಆಗಾಗ ಪ್ರಯಾಣ ಮಾಡುತ್ತಿರುತ್ತೇನೆ. ಬೇಗ ಬಂದವರಿಗೆ ಜನರಲ್‌ ಬೋಗಿಯಲ್ಲಿ ಸೀಟು ಸಿಗುತ್ತದೆ. ಹೀಗೆ ಸೀಟು ಹಿಡಿದು ಕೂತವರಿಗೆ ಶೌಚಾಲಯಕ್ಕೆ ಎದ್ದು ಹೋಗುವುದೂ ಕಷ್ಟ. ಕುಳಿತಿದ್ದವರು ಎದ್ದು ಹೋದರೆ ಮತ್ತೆ ಸೀಟು ಸಿಗುವುದಿಲ್ಲ. ಸೀಟಿಗಾಗಿಯೇ ಹಲವು ಬಾರಿ ಜಗಳಗಳು ನಡೆದಿವೆ. ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳು ಇದ್ದರಂತೂ ಜಾಡಿಯಲ್ಲಿ ಉಪ್ಪಿನಕಾಯಿ ತುಂಬಿದಂತೆ ಪ್ರಯಾಣಿಕರು ತುಂಬಿರುತ್ತಾರೆ. ರಾಯಸಾಬ್‌ ಅನ್ಸಾರಿ ಪ್ರಯಾಣಿಕ ಹುಬ್ಬಳ್ಳಿ ಎ.ಸಿ ಕೋಚ್‌ಗಳಿಗೆ ಸ್ಕ್ಯಾನಿಂಗ್ ಅಳವಡಿಸಿ ನಾನು ಎ.ಸಿ. ಕೋಚ್‌ನಲ್ಲೇ ಪ್ರಯಾಣಿಸುವುದು. ಜನರಲ್‌ ಬೋಗಿ ಭರ್ತಿಯಾದ ಕಾರಣ ಅಲ್ಲಿನ ಪ್ರಯಾಣಿಕರು ಎ.ಸಿ ಕೋಚ್‌ಗಳಿಗೆ ನುಗ್ಗುತ್ತಾರೆ. ಇದನ್ನು ತಪ್ಪಿಸಲು ಜನರಲ್‌ ಬೋಗಿಗಳನ್ನು ಹೆಚ್ಚಿಸಬೇಕು. ಜೊತೆಗೆ ಎ.ಸಿ ಕೋಚ್‌ಗಳಿಗೆ ಸ್ಕ್ಯಾನಿಂಗ್‌ ಸಿಸ್ಟಂ ಅಳವಡಿಸಬೇಕು. ಎ.ಸಿ ಕೋಚ್‌ ಪ್ರಯಾಣಿಕರ ಟಿಕೆಟ್‌ನಲ್ಲಿ ಕ್ಯೂಆರ್‌ ಕೋಡ್‌ ಇರಬೇಕು. ಅದನ್ನು ಸ್ಕ್ಯಾನ್‌ ಮಾಡಿದರಷ್ಟೇ ಬಾಗಿಲು ತೆರೆಯುವಂತಾಗಬೇಕು ರಾಘವೇಂದ್ರ ಉಡುಪಿ ರೈಲು ಪ್ರಯಾಣಿಕ

ವಿಶೇಷ ರೈಲು ಎಂಬ ಲೆಕ್ಕಾಚಾರ

ಜನದಟ್ಟಣೆ ಹೆಚ್ಚಿರುವಾಗ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಮೂಲಕ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಕಾರ್ಯ ನಿರ್ವಹಿಸುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯ ರೈಲಿಗಿಂತ ವಿಶೇಷ ರೈಲಿನಲ್ಲಿ ಟಿಕೆಟ್‌ ದರ ಶೇ 30ರಷ್ಟು ಅಧಿಕವಾಗಿರುತ್ತದೆ. ಅದಕ್ಕಾಗಿಯೇ ಜನದಟ್ಟಣೆ ಸಮಯದಲ್ಲಿ  ಅಲ್ಲದೇ ನಿಯಮಿತವಾಗಿ ಸಂಚರಿಸುವ ಹಲವು ರೈಲುಗಳನ್ನು ಕೂಡ ವಿಶೇಷ ರೈಲು ಎಂದೇ ತೋರಿಸುತ್ತಿದ್ದಾರೆ. ಯಶವಂತಪುರ–ವಿಜಯಪುರ ಮಂಗಳೂರು–ವಿಜಯಪುರ ರೈಲುಗಳು ಈ ರೀತಿ ಇವೆ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್ ಮಾಹಿತಿ ನೀಡುತ್ತಾರೆ.

ಬೆಂಗಳೂರಿನಿಂದ ಕಲಬುರಗಿಗೆ ಭಾನುವಾರ ರಾತ್ರಿ ಹೊರಟಿದ್ದ ಹಾಸನ–ಸೋಲಾಪುರ ರೈಲಿನ ಸ್ಲೀಪರ್ ಬೋಗಿಯಲ್ಲಿ ಕೆಳಗಡೆ ಕುಳಿತಿದ್ದ ಪ್ರಯಾಣಿಕರು
ಹಾಸನ–ಸೋಲಾಪುರ ರೈಲಿನ ಸ್ಲೀಪರ್ ಬೋಗಿಯೇ ಜನರಲ್‌ ಬೋಗಿ ತರಹ ಆಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.