ADVERTISEMENT

ಕೋವಿಡ್–19 ವದಂತಿ: ಕೋಳಿಮಾಂಸ ಬೆಲೆ ₹ 170 ರಿಂದ ₹ 40ಕ್ಕೆ ಇಳಿಕೆ 

ಮಾರಾಟದಲ್ಲಿ ಗಣನೀಯ ಕುಸಿತ: ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 2:26 IST
Last Updated 11 ಮಾರ್ಚ್ 2020, 2:26 IST
ಕೋಳಿ ಮಾಂಸ
ಕೋಳಿ ಮಾಂಸ   

ತುಮಕೂರು: ಕೋಳಿ ಮಾಂಸ ಸೇವನೆಯಿಂದ ಕೋವಿಡ್–19 ಸೋಂಕು ತಗಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ವದಂತಿಯಿಂದ ಜಿಲ್ಲೆಯ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿರುವುದರಿಂದ ಬೆಲೆಯಲ್ಲೂ ಬೆಲೆ ತೀವ್ರವಾಗಿ ಕುಸಿತ ಕಂಡಿದೆ.

ತಿಂಗಳಿನಿಂದ ಕೋಳಿ ಮಾಂಸದ ಬೆಲೆಯು ನಿರಂತರವಾಗಿ ಇಳಿಮುಖವಾಗಿದ್ದು, ತಿಂಗಳ ಹಿಂದೆ ಕೆ.ಜಿ.ಗೆ ₹170ರಿಂದ ₹ 140ರ ಆಸುಪಾಸಿನಲ್ಲಿ ಧಾರಣೆ ಇತ್ತು. ಈಗ ₹ 30ರಿಂದ ₹ 70ಕ್ಕೆ ಇಳಿಕೆಯಾಗಿದೆ.

ಜಿಲ್ಲೆಯಲ್ಲಿ ಬ್ರಾಯ್ಲರ್‌ (ಮಾಂಸದ ಕೋಳಿ), ಲೇಯರ್‌ (ಮೊಟ್ಟೆ ಕೋಳಿ) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 15 ಲಕ್ಷ ಬ್ರಾಯ್ಲರ್‌ ಕೋಳಿಗಳು ಮಾರುಕಟ್ಟೆಗೆ ಬರುತ್ತವೆ. ನಿತ್ಯ 2.5 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತದೆ.

ADVERTISEMENT

‘ನಿತ್ಯ 35 ಸಾವಿರ ಮೊಟ್ಟೆ ಉತ್ಪಾದನೆ ಇದ್ದು, ಅಷ್ಟೂ ಮಾರಾಟವಾಗುತ್ತಿತ್ತು. ಆದರೆ ಈಗ ದಿನಕ್ಕೆ 10 ಸಾವಿರ ಮೊಟ್ಟೆಯೂ ಮಾರಾಟವಾಗುತ್ತಿಲ್ಲ. ಕೋಳಿ ಮಾಂಸ ಮಾರಾಟದಲ್ಲಿ ಶೇ 90ರಷ್ಟು ಇಳಿಕೆಯಾಗಿದೆ. ವಾರಕ್ಕೆ 60 ಸಾವಿರ ಕೆ.ಜಿ ಮಾರಾಟವಾಗುತ್ತಿತ್ತು. ಈಗ 5 ಸಾವಿರ ಕೆ.ಜಿ ಮಾರಾಟವಾಗುತ್ತಿದೆ. ಬಂಡವಾಳ ತೊಡಗಿಸಲಾಗದೆ ಬ್ರಾಯ್ಲರ್‌ ಕೋಳಿ ಸಾಕಾಣಿಕೆ ನಿಲ್ಲಿಸಿದ್ದೇವೆ. ಇರುವಷ್ಟು ಮಾರಾಟವಾದರೆ ಸಾಕು ಎನ್ನುವಂತಾಗಿದೆ’ ಎನ್ನುತ್ತಾರೆ ದರ್ಶನ್‌ ಪೌಲ್ಟ್ರಿ ಸರ್ವಿಸ್‌ ಮಾಲೀಕ ಮಾರ್ಕಂಡೇಯ.

ವದಂತಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೆಲ ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಇಡೀ ಕುಕ್ಕುಟೋದ್ಯಮ ನಲುಗಿದೆ. ಸಾವಿರಾರು ಕುಟುಂಬಗಳು ಇದೇ ಉದ್ಯಮವನ್ನು ನಂಬಿಕೊಂಡು ಬದುಕುತ್ತಿವೆ. ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಗಾ ಇಡಬೇಕು ಎಂದು ಅವರು ಆಗ್ರಹಿಸುತ್ತಾರೆ.

‘ಸದ್ಯ ಒಂದು ಕೆ.ಜಿ ಕೋಳಿ ಮಾಂಸವನ್ನು ₹ 40ಕ್ಕೆ ಮಾರಾಟಮಾಡುತ್ತಿದ್ದೇವೆ. ಆದರೂ ಬೇಡಿಕೆ ಇಲ್ಲ. ಉದ್ಯಮಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಇದೇ ಪರಿಸ್ಥಿತಿ ಒಂದೆರಡು ತಿಂಗಳು ಮುಂದುವರಿದರೆ ನಾವು ಬೇರೆ ಉದ್ಯೋಗ ನೋಡಿಕೊಳ್ಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಭಾರತ್‌ ಮಟನ್‌ ಸ್ಟಾನ್‌ ಮಾಲೀಕ ಇಲಿಯಾಸ್‌ ಅಹಮ್ಮದ್‌.

ಕುಕ್ಕುಟೋದ್ಯಮ ಅಳಿದರೆ ಅದರ ನೇರ ಪರಿಣಾಮ ಕೃಷಿ ಮೇಲೆ ಬೀಳುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು. ಇನ್ನಾದರೂ ಎಚ್ಚೆತ್ತುಕೊಂಡು ಕುಕ್ಕುಟೋದ್ಯಮದ ನೆರವಿಗೆ ಬರಲಿ ಎನ್ನುವುದು ಅವರ ಮನವಿ.

ಎಲ್ಲ ರೋಗಕ್ಕೂ ತಳುಕು

ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಕಾಯಿಲೆ ಬಂದರೂ ಮೊದಲಿಗೆ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲ ರೋಗಗಳಿಗೂ ಕೋಳಿ ಮಾಂಸದೊಂದಿಗೆ ತಳುಕು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತದೆ. ಈಗ ಕೋವಿಡ್‌ –19 ವದಂತಿಯಿಂದಾಗಿ ಕೋಳಿ ಮಾಂಸ ಮಾರಾಟ ನೆಲಕಚ್ಚಿದೆ. ನಾವು ಹೋಟೆಲ್‌ಗಳಿಗೆ ಮಾತ್ರ ಕೋಳಿ ಮಾಂಸ ಪೂರೈಸುತ್ತಿದ್ದೇವೆ. ಉಳಿದಂತೆ ಸಂತೆಗಳಲ್ಲಿ ಕುರಿ ವ್ಯಾಪಾರದಲ್ಲಿ ನಿರತವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕರ್ನಾಟಕ ಚಿಕನ್‌ ಸ್ಟಾನ್‌ ಮಾಲೀಕ ಉಮರ್‌.

ಅಂಕಿ ಅಂಶ

₹ 65 ಕೆ.ಜಿ ಕೋಳಿ ಉತ್ಪಾದನಾ ವೆಚ್ಚ

₹ 10 ಕೆ.ಜಿ.ಗೆ ಉತ್ಪಾದಕರಿಗೆ ನೀಡುವ ದರ

₹ 30– 70 ಕೆ.ಜಿ.ಗೆ ಮಾರುಕಟ್ಟೆ ರೀಟೆಲ್‌ ದರ

***

ಮಾರ್ಚ್– ಏಪ್ರಿಲ್‌ನಲ್ಲಿ ಬಿಸಿಲಿನಿಂದಾಗಿ ಕೋಳಿ ಮಾಂಸದ ಬೇಡಿಕೆ ಶೇ 15ರಿಂದ 20ರಷ್ಟು ಕಡಿಮೆಯಾಗುತ್ತದೆ. ಈ ಬಾರಿ ವದಂತಿಯಿಂದಾಗಿ ಶೇ 70ರಷ್ಟು ಕುಸಿದಿದೆ.
ನವಾಜ್‌ ಪಾಷ, ನವಾಜ್‌ ಚಿಕನ್‌ ಸ್ಟಾಲ್‌ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.