ADVERTISEMENT

ಅಬಕಾರಿ ಸನ್ನದು ನೀಡಲು ₹2,500 ಕೋಟಿ ಲಂಚ: ತಿಮ್ಮಾಪುರ ರಾಜೀನಾಮೆಗೆ ಅಶೋಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 16:10 IST
Last Updated 18 ಜನವರಿ 2026, 16:10 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಬೆಂಗಳೂರು: ‘ಮದ್ಯ ಮಾರಾಟ ಸನ್ನದು ನೀಡುವಲ್ಲಿ ರಾಜ್ಯ ಸರ್ಕಾರದ ಪ್ರಮುಖರು ₹2,500 ಕೋಟಿಗೂ ಹೆಚ್ಚು ಲಂಚ ಹೊಡೆಯಲು ಮುಂದಾಗಿದ್ದಾರೆ. ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರ ಆಣತಿಯಂತೆಯೇ ಲಂಚದ ಹಣ ಸಂಗ್ರಹ ನಡೆಯುತ್ತಿದೆ. ತಕ್ಷಣವೇ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

‘ಮೈಕ್ರೊ ಬ್ರುವರಿ ಸನ್ನದು ಪಡೆಯಲು ಸಚಿವರಿಗೆ ₹1.50 ಕೋಟಿ ನೀಡಬೇಕು ಎಂದು ಅಧಿಕಾರಿಯೊಬ್ಬರು ಹೇಳುವ ಆಡಿಯೊ ನಮ್ಮಲ್ಲಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪಾಲಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

ಸನ್ನದು ಪಡೆದುಕೊಳ್ಳಲು ಎಷ್ಟೆಷ್ಟು ಲಂಚ ನೀಡಬೇಕು ಎಂಬುದರ ಬಗ್ಗೆ ಇಬ್ಬರು ವ್ಯಕ್ತಿಗಳು ಚರ್ಚಿಸುವ ಆಡಿಯೊ ಅನ್ನು ಅವರು ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

‘ಅಬಕಾರಿ ಇಲಾಖೆಯು 750 ಸಿಎಲ್‌–7, 650 ಸಿಎಲ್‌–2 ಮತ್ತು ಹಲವು ಸಿಎಲ್‌–9 ಸನ್ನದುಗಳನ್ನು ಹರಾಜು ಮಾಡಲು ಮುಂದಾಗಿದೆ. ಪ್ರತಿಯೊಂದು ಸನ್ನದಿಗೆ ₹1.50 ಕೋಟಿ ಲಂಚದಂತೆ, ಒಟ್ಟು ₹2,500 ಕೋಟಿ ಆಗಲಿದೆ. ಈ ಹಣವೆಲ್ಲಾ ಬಿಹಾರ, ಮಹಾರಾಷ್ಟ್ರ ಚುನಾವಣೆಗೆ ಹೋಗಿದೆ. ಇನ್ನಷ್ಟು ಹಣ ಅಸ್ಸಾಂಗೆ ಹೋಗಲಿದೆ’ ಎಂದು ಆರೋಪಿಸಿದರು.

‘ಅಬಕಾರಿ ಸಚಿವ ಅಥವಾ ಅವರ ಮಗನಿಗೆ ಲಂಚದ ಹಣ ನೀಡಬೇಕು ಎಂದು ಅಧಿಕಾರಿಗಳೇ ಹೇಳಿದ್ದಾರೆ. ಲೋಕಾಯುಕ್ತ ಪೊಲೀಸರಿಗೂ ಸಿಕ್ಕಿಬಿದ್ದಿದ್ದಾರೆ. ಮೊದಲು ಪೊಲೀಸರು ಇಂತಹ ಕೃತ್ಯಕ್ಕೆ ಇಳಿದರು. ಈಗ ಅಬಕಾರಿ ಪೊಲೀಸರೂ ಅದೇ ಹಾದಿ ಹಿಡಿದಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರೇ ಈ ಬಗ್ಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್‌ ಇಲಾಖೆಯನ್ನು ಮುಖ್ಯಮಂತ್ರಿಯೇ ಬೆತ್ತಲು ಮಾಡಿದ್ದಾರೆ. ರಾಜ್ಯದ ಆಡಳಿತದ ಸ್ಥಿತಿ ಹದಗೆಟ್ಟಿದೆ ಎಂಬುದಕ್ಕೆ ಇವೆಲ್ಲಕಿಂತ ಬೇರೆ ಸಾಕ್ಷ್ಯ ಬೇಕೆ’ ಎಂದೂ ಪ್ರಶ್ನಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.