ADVERTISEMENT

ಅಶೋಕ ಪತ್ರ: ಬಿಜೆಪಿಗೆ ಇಕ್ಕಟ್ಟು | ಅಶೋಕ– ವಿಜಯೇಂದ್ರ ಮುಸುಕಿನ ಗುದ್ದಾಟ ಬಯಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 0:27 IST
Last Updated 2 ಏಪ್ರಿಲ್ 2025, 0:27 IST
<div class="paragraphs"><p>ಅಶೋಕ– ವಿಜಯೇಂದ್ರ </p></div>

ಅಶೋಕ– ವಿಜಯೇಂದ್ರ

   

ಬೆಂಗಳೂರು: ಬಿಜೆಪಿ ರಾಜ್ಯ ಘಟಕ ಬುಧವಾರದಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಸರಣಿ ಹೋರಾಟಗಳ ಮಧ್ಯೆ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರ ನಡುವಿನ ಮುಸುಕಿನ ಗುದ್ದಾಟ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವಿಧಾನಸಭೆ ಅಧಿವೇಶನದ ವೇಳೆ ಸಭಾಧ್ಯಕ್ಷರ ಪೀಠದ ಬಳಿ ಗದ್ದಲ ಮಾಡಿದ್ದ ಪಕ್ಷದ 18 ಶಾಸಕರ ಅಮಾನತು ಕ್ರಮವನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿಯು ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ADVERTISEMENT

ಈ ಮಧ್ಯೆ, ಅಶೋಕ ಅವರು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದು, 18 ಶಾಸಕರ ಅಮಾನತು ಕ್ರಮವನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.‘ ಅಶೋಕ ಅವರ ಈ ಪತ್ರ ಪಕ್ಷದ ತೀರ್ಮಾನಕ್ಕೆ ವ್ಯತಿರಿಕ್ತವಾಗಿದೆ. ಹೋರಾಟದ ಸ್ಫೂರ್ತಿಗೆ ಹಿನ್ನಡೆ ಉಂಟು ಮಾಡಲಿದ್ದು; ಇದರಿಂದ ಪಕ್ಷ ಇಕ್ಕಟ್ಟಿಗೆ ಸಿಲುಕುವಂತಾಗಿದೆ’ ಎಂಬ ಚರ್ಚೆ ಪಕ್ಷದ ವಲಯದಲ್ಲಿ ಆರಂಭವಾಗಿದೆ.

ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಬುಧವಾರ ಬೆಳಿಗ್ಗೆ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿ ಪ್ರತಿಭಟನೆ ನಡೆಸುವುದಾಗಿ ಬಿ.ವೈ.ವಿಜಯೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪ್ರತಿಭಟನೆ ಬಗ್ಗೆ ಯಾವುದೇ ಹೇಳಿಕೆ ನೀಡದೇ ಇರುವ ಅಶೋಕ ಅವರು ಮಂಗಳವಾರ ಸಂಜೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಇದಕ್ಕೂ ಮೊದಲು ಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಶಾಸಕರ ಅಮಾನತು ಕೈಬಿಡುವಂತೆ ಕೋರಿದ್ದರು.

ವಿರೋಧ ಪಕ್ಷದ ನಾಯಕರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಜಯೇಂದ್ರ ಅವರು ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಅಶೋಕ ಅವರು ಈ ಹಿಂದೆ ಅತೃಪ್ತಿ ವ್ಯಕ್ತಪಡಿಸಿದ್ದರು. ಆ ಬಳಿಕ ವಿಜಯೇಂದ್ರ ಮತ್ತು ಅಶೋಕ ಅವರ ಮಧ್ಯೆ ಅಸಮಾಧಾನದ ಬಿರುಕು ಹೆಚ್ಚುತ್ತಲೇ ಇದೆ. ವಿಧಾನಸಭೆ ಕಲಾಪದ ವೇಳೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಚಾರದಲ್ಲಿ ಶಾಸಕರ ನಿಲುವಿಗೆ ಅಶೋಕ ಸ್ಪಂದಿಸುವುದಿಲ್ಲ. ಧರಣಿಗೆ ಹೊರಟರೆ ಅದಕ್ಕೆ ತಡೆ ಹಾಕುತ್ತಾರೆ ಎಂಬ ಅಸಮಾಧಾನವನ್ನೂ ಶಾಸಕರು ಹಲವು ಬಾರಿ ವ್ಯಕ್ತಪಡಿಸಿದ್ದಾರೆ.

‘ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ, ಅಶೋಕ ಅವರು ಪಕ್ಷದ ತೀರ್ಮಾನಕ್ಕೆ ಭಿನ್ನವಾಗಿ ನಡೆದುಕೊಂಡಿದ್ದಾರೆ. ಅವರು ಸಭಾಧ್ಯಕ್ಷರನ್ನು ಓಲೈಸುವಂತೆ ಪತ್ರ ಬರೆದಿದ್ದಾರೆ. ಒಂದು ವೇಳೆ ಸಭಾಧ್ಯಕ್ಷರು ಇದಕ್ಕೆ ಸ್ಪಂದಿಸಿ ತಮ್ಮ ಕ್ರಮವನ್ನು ಹಿಂದಕ್ಕೆ ಪಡೆದರೇ ನಿಶ್ಚಿತವಾಗಿ ಪಕ್ಷದ ಹೋರಾಟಕ್ಕೆ ಹಿನ್ನಡೆ ಆಗುತ್ತದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ವಿಧಾನಸಭೆ ಕಲಾಪದ ಸಂದರ್ಭದಲ್ಲೂ ಮಧುಬಲೆ ವಿಷಯದಲ್ಲಿ ಅಶೋಕ ಅವರು, ಸಚಿವರ ರಾಜೀನಾಮೆ ಮತ್ತು ತನಿಖೆಗೆ ಒತ್ತಾಯಿಸಲಿಲ್ಲ ಎಂದು ವಿ.ಸುನಿಲ್‌ಕುಮಾರ್, ಎಸ್‌.ಆರ್‌.ವಿಶ್ವನಾಥ್ ಮತ್ತು ಇತರ ಶಾಸಕರು ಹರಿಹಾಯ್ದಿದ್ದರು.

ಸಭಾಧ್ಯಕ್ಷರಿಗೆ ಅಶೋಕ ಪತ್ರದ ಸಾರಾಂಶ

‘ಮಾರ್ಚ್‌ 23 ರಂದು ನಡೆದ ಘಟನೆ ಉದ್ದೇಶ ಪೂರ್ವಕವಲ್ಲ. ನಿಮ್ಮ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವುದೇ ಶಾಸಕರಿಗೆ ಇರಲಿಲ್ಲ. ಸದನದ ಘನತೆ ಮತ್ತು ಗೌರವವನ್ನು ಉಳಿಸಬೇಕಾಗಿದೆ ಎಂಬ ತತ್ವದಲ್ಲಿ ನಂಬಿಕೆ ಇರಿಸಿ 18 ಶಾಸಕರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆರ್‌.ಅಶೋಕ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ‘ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ ಯಾರಿಗೇ ಆಗಲಿ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ’ ಎಂದು ಹೇಳಿದ್ದಾರೆ. ‘ಒಂದು ವೇಳೆ ಆ ದಿನ ತಾವು ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೆ ನಾವು ಈ ಘಟನೆಯ ಬಗ್ಗೆ  ಸ್ಪಷ್ಟೀಕರಣ ಕೊಡುತ್ತಿದ್ದೆವು. ಅದಕ್ಕೆ ಅವಕಾಶ ಸಿಗಲಿಲ್ಲ. ಅಮಾನತಿನಿಂದಾಗಿ 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಹಲವು ನಿರ್ಬಂಧ ವಿಧಿಸಿದಂತಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕೊಡುವುದಕ್ಕಾಗಿ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.