ಬೆಂಗಳೂರು: ನಗರದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿ ದಂಡ ಮತ್ತು ದಂಡದ ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿಯವರ ಜತೆಗ ಚರ್ಚಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಜತೆ ಸೋಮವಾರ ಅವರು ಈ ಸಂಬಂಧ ಚರ್ಚೆ ನಡೆಸಿದರು.
ಕೋವಿಡ್ ಮತ್ತು ಲಾಕ್‌ಡೌನ್ ಕಾರಣಕ್ಕೆ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಇದೇ ವೇಳೆ ದಂಡ ಮತ್ತು ಬಡ್ಡಿಗೆ ಗುರಿಯಾಗಿದ್ದಾರೆ. ಹೀಗಾಗಿ ಕಷ್ಟದಲ್ಲಿರುವ ಆಸ್ತಿ ಮಾಲೀಕರಿಗೆ ರಿಯಾಯಿತಿ ನೀಡುವ ಬಗ್ಗೆ ಪರಿಶೀಲನೆ ಮಾಡುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದಕ್ಕೆ ಮುಖ್ಯಮಂತ್ರಿಯವರ ಒಪ್ಪಿಗೆ ಅಗತ್ಯವಿದೆ ಎಂದರು.
ಈ ವಿಚಾರವಾಗಿ ಮಲ್ಲೇಶ್ವರ ಅಲ್ಲದೆ, ನಗರದ ವಿವಿಧ ವಲಯಗಳ ಜನರು ತಮಗೆ ಮನವಿ ನೀಡಿದ್ದಾರೆ. ಇವರು ಸಮಸ್ಯೆಗೆ ಸಿಲುಕಿದ್ದು, ಸಂಕಷ್ಟದಿಂದ ಪಾರು ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಬಿಬಿಎಂಪಿಯು ಆರು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡದೇ ಬಿಟ್ಟಿದ್ದು ಲೋಪ. ಈಗ ಏಕಾಏಕಿ ದಂಡ– ಬಡ್ಡಿ ಒಟ್ಟಿಗೆ ವಿಧಿಸಿದರೆ ಜನರಿಗೆ ಕಷ್ಟವಾಗುತ್ತದೆ ಎಂದರು. ಸಭೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಬಸವರಾಜ ಹಾಗೂ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.