ADVERTISEMENT

ಬಿರಿಯಾನಿ ತಿನ್ನದಿದ್ದರೆ ಹೇಗೆ: ಮುಖ್ಯಮಂತ್ರಿಗೆ ಸಭಾಧ್ಯಕ್ಷರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 1:21 IST
Last Updated 23 ಜುಲೈ 2019, 1:21 IST
ಶುಕ್ರವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್‌ ರಮೇಶ್‌ಕುಮಾರ್ ಅವರು ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ರೀತಿ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌-Photo/ Krishnakumar P S
ಶುಕ್ರವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್‌ ರಮೇಶ್‌ಕುಮಾರ್ ಅವರು ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ರೀತಿ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌-Photo/ Krishnakumar P S   

ಬೆಂಗಳೂರು: ‘ನೀವೇ ಬಿರಿಯಾನಿ ತಿನ್ನದಿದ್ದರೆ ಹೇಗೆ. ನಮ್ಮಂಥವರ ಗತಿಯೇನು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಛೇಡಿಸಿದರು.

ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ವೇಳೆ ಈ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. 46 ಸಾವಿರ ಬಡ ಜನರಿಗೆ ಮೋಸ ಮಾಡಿದ ಕಂಪನಿಯ ಜತೆಗೆ ರಾಜೀನಾಮೆ ನೀಡಿದ ಶಾಸಕರೊಬ್ಬರು ನಂಟು ಹೊಂದಿದ್ದಾರೆ. ಈ ಶಾಸಕರು ₹450 ಕೋಟಿ ಪಡೆದಿದ್ದಾರೆ ಎಂದು ಕಂಪನಿಯ ಮಾಲೀಕರು ಹೇಳಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮಧ್ಯಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ, ‘46 ಸಾವಿರ ಬಡ ಜನರಿಗೆ ಅನ್ಯಾಯ ಮಾಡಿದ ಸಂಸ್ಥೆಯ ಮಾಲೀಕರ ಜತೆಗೆ ಇಲ್ಲಿರುವವರು ಬಿರಿಯಾನಿ ತಿಂದಿದ್ದಾರೆ. ತಪ್ಪು ಮಾಡಿದವರನ್ನು ನೇಣಿಗೆ ಹಾಕಬೇಕು’ ಎಂದರು.

ADVERTISEMENT

ಆಗ ಎದ್ದು ನಿಂತ ಕುಮಾರಸ್ವಾಮಿ, ‘ರವಿ ಅವರು ನನ್ನನ್ನು ಉಲ್ಲೇಖಿಸಿಯೇ ಈ ಮಾತು ಹೇಳಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಒಂದು ಸಲ ಕಂಪನಿಯ ಮಾಲೀಕನನ್ನು ಕರೆದುಕೊಂಡು ಬಂದಿದ್ದರು. ಇಫ್ತಾರ್‌ ಕೂಟಕ್ಕೆ ಬರುವಂತೆ ಒತ್ತಾಯಿಸಿದ್ದರು. ಹೀಗಾಗಿ, ಆ ಕೂಟಕ್ಕೆ ಹೋಗಿದ್ದೆ. ಅಲ್ಲಿ ಬಿರಿಯಾನಿ ತಿಂದಿರಲಿಲ್ಲ. ಖರ್ಜೂರದ ಚೂರೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ. ಎರಡನೇ ಸಲ ಹೃದಯ ಶಸ್ತ್ರಚಿಕಿತ್ಸೆಯಾದ ಬಳಿಕ ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ’ ಎಂದರು.

‘ಅಯ್ಯೋ, ನೀವೇ ಮಾಂಸ ತಿನ್ನದಿದ್ದರೆ ಹೇಗೆ. ನಾಟಿ ಕೋಳಿ, ಫಿಶ್‌ ಆದರೂ ತಿನ್ನಿ. ಅಮ್ಮನಿಗೆ ಹೇಳುತ್ತೇನೆ ಬಿಡಿ’ ಎಂದು ರಮೇಶ್‌ ಕುಮಾರ್ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.