ಆರ್. ಅಶೋಕ
ಬೆಂಗಳೂರು: ಬಿಜೆಪಿ ನಡೆಸುತ್ತಿರುವ ‘ಭೀಮ ಹೆಜ್ಜೆ’ ಯಾತ್ರೆ ಬಿಜೆಪಿಗರ ಅನೈತಿಕ ಯಾತ್ರೆಯಾಗಿದೆ ಎಂದು ಹೇಳಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಪೋಸ್ಟ್ ಮಾಡಿರುವ ಅವರು, ‘ಮಹದೇವಪ್ಪನವರೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆಯನ್ನು ಹೆಣೆದಿದ್ದು, ಅವರನ್ನು ಸೋಲಿಸಲು ನಾರಾಯಣ ಸದೋಬಾ ಕರ್ಜೋಲ್ಕರ್‌ಗೆ ಸಂಪನ್ಮೂಲ ಒದಗಿಸಿದ್ದು ಕೂಡ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರನ್ನು ಸೋಲಿಸಿದ್ದಕಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಬಹುಮಾನ ಕೊಟ್ಟಿದ್ದೂ ಕಾಂಗ್ರೆಸ್ ಪಕ್ಷ’ ಎಂದು ಕಿಡಿಕಾರಿದ್ದಾರೆ.
ಬಾಬಾ ಸಾಹೇಬರ ಸೋಲಿಗೆ ಇಷ್ಟೆಲ್ಲಾ ಕುತಂತ್ರ, ಹುನ್ನಾರ ಮಾಡಿ, ಅವರಿಗೆ ಭಾರತ ರತ್ನವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ಪಕ್ಷ, ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್ ಸಂಚು ಮಾಡಿದ್ದರು ಎಂದು ಹೇಳುವುದು ನಾಚಿಕೆಗೇಡಿನ ಪರಮಾವಧಿ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅವರ ಸಮಗ್ರ ಜೀವನ ಚರಿತ್ರೆಯಲ್ಲಿಯೂ, 1974ರಲ್ಲಿ ಸ್ವತಃ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಪುಸ್ತಕದಲ್ಲಿಯೂ, ಕರ್ನಾಟಕ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಅಂಬೇಡ್ಕರ್ ಸಮಗ್ರದಲ್ಲಿಯೂ ಈ ಬಗ್ಗೆ ಎಲ್ಲಿಯೂ ಸಾವರ್ಕರ್ ಅವರ ಈ ವಿಚಾರದ ಬಗ್ಗೆ ಉಲ್ಲೇಖವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರ ಬಗ್ಗೆ ಇದ್ದ ಅಸಹನೆ, ಅವರನ್ನು ತುಳಿಯಲು, ಕಡೆಗಣಿಸಲು ಪದೇ ಪದೇ ಮಾಡಿದ ಪ್ರಯತ್ನಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ ಎಂದು ಅಶೋಕ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದ ಅನ್ಯಾಯ, ಅವರನ್ನು ನಡೆಸಿಕೊಂಡ ರೀತಿ ಬಗ್ಗೆ ತಮ್ಮದೇ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲೇ ಏನು ಹೇಳಿದ್ದಾರೆ ಎಂದು ಒಮ್ಮೆ ಕೇಳಿ. ನಿಜವಾದ ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಕುರಿತು ಮಾಜಿ ಸ್ಫೀಕರ್ ರಮೇಶ್ ಕುಮಾರ್ ಸದನದಲ್ಲಿ ಮಾತನಾಡಿರುವ ವಿಡಿಯೊ ತುಣುಕನ್ನು ಆರ್.ಅಶೋಕ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.