ADVERTISEMENT

ಬಗರ್‌ಹುಕುಂ: ಕಾಲಮಿತಿ 2 ವರ್ಷ ವಿಸ್ತರಣೆ

ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 22:06 IST
Last Updated 24 ಸೆಪ್ಟೆಂಬರ್ 2020, 22:06 IST

ಬೆಂಗಳೂರು: ಬಗರ್‌ಹುಕುಂ ಕಾಲಮಿತಿಯನ್ನು ಮತ್ತೆ ಎರಡು ವರ್ಷಗಳಿಗೆ ವಿಸ್ತರಿಸಲು ಅನುವು ಮಾಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ– 2020 ಅನ್ನು ಕಂದಾಯ ಸಚಿವ ಆರ್‌.ಅಶೋಕ ಅವರು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದರು.

‘ಅನಧಿಕೃತ ಬೇಸಾಯ ಭೂಮಿಯ ಸಕ್ರಮೀಕರಣಕ್ಕಾಗಿ ಅರ್ಜಿಗಳ ವಿಲೇವಾರಿ ಬಾಕಿ ಇದೆ. ನಮೂನೆ 50ರಲ್ಲಿ 10,572 ಅರ್ಜಿಗಳು ಹಾಗೂ ನಮೂನೆ 53ರಲ್ಲಿ 1,40,781 ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ. ಕಾಲಮಿತಿಯು ಈ ವರ್ಷದ ಏಪ್ರಿಲ್‌ 27ಕ್ಕೆ ಕೊನೆಗೊಂಡಿದೆ. ಹೀಗಾಗಿ, ಕಾಲಮಿತಿಯನ್ನು ಎರಡು ವರ್ಷ ವಿಸ್ತರಿಸುವುದು ಅವಶ್ಯಕ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ರಸ್ತೆ, ಬೀದಿ, ಓಣಿ ಅಥವಾ ಬಿ ಖರಾಬು ಭೂಮಿಯನ್ನು ಘೋಷಿಸಿದ ಬಳಿಕ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು 90ದಿನಗಳಿಂದ 30 ದಿನಗಳಿಗೆ ಇಳಿಸಲು 68ನೇ ಪ್ರಕರಣಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ.

ADVERTISEMENT

ಸಾದಿಲ್ವಾರು ನಿಧಿ ₹500 ಕೋಟಿಗೆ: ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಪತ್ತುಗಳಂತಹ ತುರ್ತು ಸನ್ನಿವೇಶಗಳಲ್ಲಿ ಸಂತ್ರಸ್ತರಿಗೆ ಬಿಡುಗಡೆಗೊಳಿಸಲು ಅನುಕೂಲ ಕಲ್ಪಿಸುವ ಸಾದಿಲ್ವಾರು ನಿಧಿಯನ್ನು ₹ 80 ಕೋಟಿಯಿಂದ ₹500 ಕೋಟಿಗೆ ಏರಿಸುವ ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ. ಅದರಲ್ಲಿ ಆಟೊ ಅಥವಾ ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರು, ಅಗಸರಿಗೆ ₹5 ಸಾವಿರ, ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ ₹15 ಸಾವಿರ ನೀಡಲಾಗುತ್ತದೆ ಎಂದು ಪ್ರಕಟಿಸಿದ್ದರು. ಈ ಮೊತ್ತವನ್ನು ಬಜೆಟ್‌ನಲ್ಲಿ ಪ್ರಕಟಿಸಲಿಲ್ಲ. ಇದನ್ನು ಸಾದಿಲ್ವಾರು ನಿಧಿಯಿಂದ ಭರಿಸಲಾಗುತ್ತಿದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.‌

Karnataka Land Revenue Bill

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.