ADVERTISEMENT

16 ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ ಅಟಲ್‌ ಭೂಜಲ್‌ ಜಾರಿ: ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 11:35 IST
Last Updated 3 ಜೂನ್ 2020, 11:35 IST
ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ಅಟಲ್‌ ಭೂಜಲ್‌ ಯೋಜನೆಯಡಿ ಮೊದಲ ಹಂತದಲ್ಲಿ 16 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿ ನೀರಿನ ಅಂತರ್ಜಲಮಟ್ಟ ಏರಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹1,230 ಕೋಟಿಯನ್ನು ಮೀಸಲಿಟ್ಟಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರವೇ 16 ಜಿಲ್ಲೆಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಿದೆ. ಮಳೆಯ ಮೂಲಕ ಭೂಮಿಗೆ ಬಿದ್ದ ನೀರು ಇಂಗುತ್ತಿಲ್ಲ. ರಾಜ್ಯದಲ್ಲಿ ನೀರಿನ ಮಟ್ಟ ಬಹಳ ಕುಸಿದಿದೆ ಮತ್ತು ಅಂತರ್ಜಲ ಮಟ್ಟವೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿ ಅತಿ ಅವಶ್ಯಕ. ಈ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ಹೇಳಿದರು.

ADVERTISEMENT

ಕೇಂದ್ರದ ಸೂಚನೆಯಂತೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಗದಗ, ಬೆಳಗಾವಿ, ಹಾಸನ ಜಿಲ್ಲೆಯಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಬೆಳ್ಳಂದೂರು ಕೆರೆಯ ಹೂಳು ತೆಗೆಯಲು ₹300 ಕೋಟಿ ಬಂದಿದೆ, ಆದರೆ, ಹೂಳು ತೆಗೆಯಲು ಆಗುತ್ತಿಲ್ಲ. ಪ್ರತಿನಿತ್ಯ ಏನಿಲ್ಲ ಅಂದರೂ 300 ರಿಂದ 400 ಲಾರಿ ಲೋಡ್‌ಗಳಷ್ಟು ಹೂಳು ತೆಗೆದು ಸಾಗಿಸಬೇಕು. ಇದಕ್ಕೆ ಸಾರ್ವಜನಿಕರು ಆಕ್ಷೇಪ ಎತ್ತಬಹುದು. ಹೂಳು ತೆಗೆಯಲು ಹಸಿರು ಪೀಠ ಸೂಚನೆ ನೀಡಿದೆ. ಹೂಳು ತೆಗೆಯಲು 2 ವರ್ಷವಾದರೂ ಬೇಕು. ಅದನ್ನು ಕಾರ್ಯಗತಗೊಳಿಸುವುದು ಹೇಗೆ ಎಂಬ ಜಿಜ್ಞಾಸೆ ಕಾಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದರು.

ಉಸ್ತುವಾರಿ ಬದಲಾವಣೆ ಬೇಸರ ಇಲ್ಲ

ಹಾಸನ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸಿರುವುದಕ್ಕೆ ಬೇಸರವಿಲ್ಲ. ತುಮಕೂರು ಜಿಲ್ಲೆ ಉಸ್ತುವಾರಿ ಇದೆ. ಹಾಸನ ಜಿಲ್ಲಾ ಉಸ್ತುವಾರಿ ಆಗಿದ್ದಾಗ ಶಾಸಕ ಎಚ್‌.ಡಿ.ರೇವಣ್ಣ ನನಗೆ ಕಾಟ ಕೊಟ್ಟಿಲ್ಲ. ಅವರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.