ADVERTISEMENT

ಅತ್ತಿಬೆಲೆ ಪಟಾಕಿ ದುರಂತ: ಅಮಾನತು ಆದೇಶ ರದ್ದುಪಡಿಸಲು ಕೆಎಟಿ ನಕಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:58 IST
Last Updated 5 ಡಿಸೆಂಬರ್ 2023, 16:58 IST
<div class="paragraphs"><p>ಅತ್ತಿಬೆಲೆ ಪಟಾಕಿ ದುರಂತ ಸ್ಥಳ ಪರಿಶೀಲನೆ </p></div>

ಅತ್ತಿಬೆಲೆ ಪಟಾಕಿ ದುರಂತ ಸ್ಥಳ ಪರಿಶೀಲನೆ

   

ಬೆಂಗಳೂರು: ಅತ್ತಿಬೆಲೆ ಬಾಲಾಜಿ ಟ್ರೇಡರ್ಸ್‌ಗೆ ಸೇರಿದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 15ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪುರಸ್ಕರಿಸಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಆನೇಕಲ್‌ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಅತ್ತಿಬೆಲೆ ವೃತ್ತದ ಕಂದಾಯ ನಿರೀಕ್ಷಕ ಎ.ಪುಷ್ಪರಾಜ್ ಮತ್ತು ಅತ್ತಿಬೆಲೆ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಭಾಗೇಶ್ ಹೊಸಮನಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಕೆಎಟಿ ಮುಖ್ಯಸ್ಥ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ಪೀಠ ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ADVERTISEMENT

ವಿಚಾರಣೆ ವೇಳೆ ಸರ್ಕಾರಿ ವಕೀಲ ಜಿ.ರಮೇಶ್‌ ನಾಯ್ಕ್‌, ‘ಅಗ್ನಿ ಅವಘಡ ಸಂಭವಿಸಲು ಅರ್ಜಿದಾರರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವೇ ಕಾರಣವಾಗಿದೆ. ಆದ್ದರಿಂದ, ಇವರನ್ನು ಅಮಾನತು ಮಾಡಿರುವ ಸರ್ಕಾರದ ಆದೇಶ ಕಾನೂನು ಪ್ರಕಾರವಾಗಿದೆ‘ ಎಂದು ಮಂಡಿಸಿದ್ದ ವಾದಾಂಶವನ್ನು ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು?: ಆನೇಕಲ್ ತಾಲ್ಲೂಕಿನ ಬಾಲಾಜಿ ಟ್ರೇಡರ್ಸ್‌ನಲ್ಲಿ 2023ರ ಅಕ್ಟೋಬರ್ 7ರಂದು ಪಟಾಕಿ ದಾಸ್ತಾನಿಗೆ ಬೆಂಕಿ ಬಿದ್ದ ಪರಿಣಾಮ 14 ಜನರು ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.