ADVERTISEMENT

ಆಡಿಯೊ ರಾದ್ಧಾಂತ; ರಾಜಕೀಯ ಕೆಸರೆರಚಾಟ

ಬಿಎಸ್‌ವೈ ಹಲ್ಕಾ ಕೆಲಸ ಮಾಡಲ್ಲ– ಬಿಜೆಪಿ; ಸ್ವಲ್ಪ ತಿಳಿವಳಿಕೆ ಇದ್ದವರಿಗೆ ಧ್ವನಿ ಗೊತ್ತಾಗುತ್ತದೆ– ಸಿ.ಎಂ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಶನಿವಾರ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ
ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಶನಿವಾರ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಮಿಷ ಒಡ್ಡಿದ್ದರೆನ್ನಲಾದ ಸಂಭಾಷಣೆ ಒಳಗೊಂಡಿರುವ ಆಡಿಯೊ ಮೈತ್ರಿ ಪಕ್ಷಗಳು (ಜೆಡಿಎಸ್‌– ಕಾಂಗ್ರೆಸ್‌) ಮತ್ತು ಬಿಜೆಪಿ ಮಧ್ಯೆ ರಾಜಕೀಯ ಕೆಸೆರೆರಚಾಟಕ್ಕೆ ಕಾರಣವಾಗಿದೆ.

ಶುಕ್ರವಾರ ಬಜೆಟ್‌ ಮಂಡನೆಗೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಆಡಿಯೊ ಬಿಡುಗಡೆ ಮಾಡಿದ್ದರು.

ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ, ‘ಆಡಿಯೊದಲ್ಲಿ ಸಭಾಧ್ಯಕ್ಷರ ಹೆಸರೂ ಪ್ರಸ್ತಾಪವಾಗಿದೆ. ಆ ಮೂಲಕ, ಗೌರವಾನ್ವಿತ ಹುದ್ದೆಯನ್ನೂ ದುರ್ಬಳಕೆ ಮಾಡಲು ಗಂಭೀರ ಯತ್ನ ನಡೆದಿದೆ. ಸೂಕ್ತ ನಿರ್ಧಾರ ಕೈಗೊಳ್ಳಲು ಪಕ್ಷ ಕಾನೂನು ತಜ್ಞರ ಸಲಹೆ ಪಡೆಯಲಿದೆ’ ಎಂದರು.

ADVERTISEMENT

‘ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಲು ಯಡಿಯೂರಪ್ಪ ಷಡ್ಯಂತ್ರ ನಡೆಸಿರುವ ಬಗ್ಗೆಯೂ ಗೃಹ ಇಲಾಖೆ ಕಾನೂನು ಕ್ರಮಕೈಗೊಳ್ಳಲಿದೆ’ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆ‍ಪಿ ಶಾಸಕ ಆಯನೂರು ಮಂಜುನಾಥ್, ‘ಕಾಂಗ್ರೆಸ್-ಜೆಡಿಎಸ್ ನಕಲಿ ಶಾಮರ ತಂಡ ಕಟ್ಟಿಕೊಂಡಿದೆ. ಕುಮಾರಸ್ವಾಮಿಯವರ ಮಗನ ಸಿನಿಮಾ ಆದ ಮೇಲೆ ಈಗ ತಾವೇ ಚಿತ್ರ ಮಾಡಲು ಹೊರಟಿದ್ದಾರೆ. ಸ್ವತಃ ಆಡಿಯೊ–ವಿಡಿಯೊ ಸಂಸ್ಥೆ ಮಾಲೀಕರೂ ಆಗಿದ್ದಾರೆ’ ಎಂದರು ಕುಟುಕಿದರು.

‘ಯಡಿಯೂರಪ್ಪ ಹಳ್ಳಿಯವರು, ಮುಗ್ಧರು. ಹಲ್ಕಾ ಕೆಲಸ ಮಾಡುವುದು ಅವರಿಗೆ ಗೊತ್ತಿಲ್ಲ. ಹುಟ್ಟು ಹೋರಾಟಗಾರರಾದ ಅವರನ್ನು ಸಿಕ್ಕಿ ಹಾಕಿಸುವ ಪಿತೂರಿ ನಡೆದಿದೆ’ ಎಂದರು.

‘ಅತೃಪ್ತ ಕಾಂಗ್ರೆಸ್ ಶಾಸಕರನ್ನು ನಾವು ಸಂಪರ್ಕಿಸಿಲ್ಲ. ಅವರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ನಾವು ಆಪರೇಷನ್ ಮಾಡುತ್ತಿಲ್ಲ. ಆದರೆ ಅತೃಪ್ತಗೊಂಡ ಶಾಸಕರೇ ಸಿಡಿದು ಅಲ್ಲಿ ಇಲ್ಲಿ ಹೋಗಿದ್ದಾರೆ. ಅತೃಪ್ತ ಶಾಸಕರ ಸ್ನೇಹಿತರಾದ ಡಾ. ಅಶ್ವತ್ಥ್ ನಾರಾಯಣ ಚಿಕಿತ್ಸೆ ಕೊಡಲು ಹೋಗಿರಬಹುದು’ ಎಂದು ಹೇಳುವ ಮೂಲಕ ‘ಆಪರೇಷನ್ ಕಮಲ’ ಜೀವಂತವಿದೆ ಎಂಬ ಸುಳಿವು ನೀಡಿದರು.

‘ವಿಜೂಗೌಡ ಪಾಟೀಲ ಅವರನ್ನು ವಿಧಾನಪರಿಷತ್‌ ಸದಸ್ಯ ಮಾಡಲು ಕುಮಾರಸ್ವಾಮಿ ₹ 25 ಕೋಟಿ ಕೇಳಿದ್ದಕ್ಕೆ ಸಾಕ್ಷ್ಯ ಇದೆ. ರಮೇಶ್ ಗೌಡ ಅವರನ್ನು ವಿಧಾನ ಪರಿಷತ್‌ ಸದಸ್ಯ ಮಾಡುವ ಸಂದರ್ಭದಲ್ಲಿ ಜೆಡಿಎಸ್ ಮುಖಂಡರೇ ಏನೆಲ್ಲ ಹೇಳಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ವಿಜೂಗೌಡ ಪಾಟೀಲ ಅವರಿಂದ ಹಣ ಕೇಳಿದ್ದ ವಿಷಯವನ್ನು ಯಡಿಯೂರಪ್ಪ ಸದನದಲ್ಲಿ ಸೋಮವಾರ ಪ್ರಸ್ತಾಪಿಸಲಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಉತ್ತರ ಕೊಡಲಿ’ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸವಾಲು ಹಾಕಿದರು.

ವಕೀಲರ ಜೊತೆ ಸ್ಪೀಕರ್‌ ಚರ್ಚೆ

‘ರಾಜಕೀಯ ಪ್ರಹಸನ’ದಲ್ಲಿ ಅನಗತ್ಯವಾಗಿ ತಮ್ಮ ಹೆಸರು ಎಳೆದು ತಂದಿರುವ ಬಗ್ಗೆ ಬೇಸರಗೊಂಡಿರುವ ಕೆ.ಆರ್‌. ರಮೇಶ್‌ ಕುಮಾರ್‌ ಈ ಸಂಬಂಧ ಕ್ರಮ ಕೈಗೊಳ್ಳುವ ಕುರಿತು ಭಾನುವಾರ ವಕೀಲರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

‘ರಾಜಕೀಯ ಜೀವನದಲ್ಲಿ ಅತ್ಯಂತ ಪರಿಶ್ರಮದಿಂದ ಸಂಪಾದಿಸಿರುವ ಹೆಸರಿಗೆ ಮಸಿ ಬಳಿಯಲು ಕೆಲವರು ಉದ್ದೇಶ‍ಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಎಂದು ರಮೇಶ್‌ ಕುಮಾರ್‌ ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

’ಈ ಆರೋಪದಿಂದ ಮುಕ್ತನಾಗಿ ಹೊರಬರಬೇಕಿದೆ. ಪ್ರಕರಣದ ವಿಚಾರಣೆಗೆ ಆಯೋಗ ರಚಿಸಿ ವರ್ಷಗಟ್ಟಲೆ ಕಾಯಲು ಸಾಧ್ಯವಿಲ್ಲ. ಆಡಿಯೊದಲ್ಲಿರುವ ಧ್ವನಿ ಯಾರದ್ದು. ಯಾವ ಕಾರಣಕ್ಕೆ ಅವರು ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂಬ ಬಗ್ಗೆ ತಿಂಗಳಲ್ಲಿ ವಿಚಾರಣೆ ನಡೆಸಿ ವರದಿ ಪಡೆಯುವುದಾಗಿ ಸ್ಪೀಕರ್‌ ಹೇಳಿರುವುದಾಗಿ ಮೂಲಗಳು ಹೇಳಿವೆ.

‘ಎಚ್‌ಡಿಕೆ ₹ 25 ಕೋಟಿ ಕೇಳಿದ್ದು ಸತ್ಯ’

ವಿಜಯಪುರ: ‘ನನ್ನನ್ನು ವಿಧಾನಪರಿಷತ್‌ ಸದಸ್ಯನನ್ನಾಗಿ ಮಾಡಲು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ 2014ರಲ್ಲಿ ₹ 25 ಕೋಟಿ ಕೇಳಿದ್ದು ಸತ್ಯ’ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌. ಪಾಟೀಲ ಸಹೋದರ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹೇಳಿದರು.

‘ಕುಮಾರಸ್ವಾಮಿಯೇ ಇದನ್ನು ಈ ಹಿಂದೆ ಒಪ್ಪಿಕೊಂಡಿದ್ದರು. ಬಬಲೇಶ್ವರದ ಕಾರ್ಯಕರ್ತರು ಭೇಟಿಯಾದ ಸಂದರ್ಭ ಎಚ್‌ಡಿಕೆ ದುಡ್ಡಿಗೆ ಬೇಡಿಕೆ ಇಟ್ಟಿದ್ದರು’ ಎಂದು ಶನಿವಾರ ತಿಳಿಸಿದರು.

‘ಎಂಎಲ್‌ಸಿ ಮಾಡಿ ಎಂದು ನಾನೆಂದೂ ದುಂಬಾಲು ಬಿದ್ದಿರಲಿಲ್ಲ. ಕುಮಾರಸ್ವಾಮಿ ಅವರೇ ಶಿವನಾಣೆ ಮಾಡಿದ್ದರು. ಇದರಂತೆ ಬಬಲೇಶ್ವರದ ಕಾರ್ಯಕರ್ತರು ಕೇಳಲು ಹೋಗಿದ್ದಾಗ ರೊಕ್ಕ ಕೇಳಿದ್ದರು. ಇದು ಮನಸ್ಸಿಗೆ ತುಂಬಾ ನೋವು ಕೊಟ್ಟಿತ್ತು’ ಎಂದು ಅವರು ತಿಳಿಸಿದರು.

‘ಸಂಸತ್‌ನಲ್ಲಿ ನಿಲುವಳಿ ಸೂಚನೆ’

ಕಲಬುರ್ಗಿ: ‘ಆಡಿಯೋ ಕ್ಲಿಪ್ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ಮಾಡಿಸಬೇಕು’ ಎಂದು ಆಗ್ರಹಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆ ,ಆಡಿಯೋ ಕ್ಲಿಪ್ ಬಗ್ಗೆ ಸಂಸತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸುತ್ತೇವೆ’ ಎಂದೂ ಹೇಳಿದರು.

‘ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ’

ಧರ್ಮಸ್ಥಳ: 'ನಾನು ಬಿಡುಗಡೆ ಮಾಡಿದ್ದ ಆಡಿಯೊ ತುಣುಕಿನಲ್ಲಿರುವ ಧ್ವನಿ ಯಡಿಯೂರಪ್ಪ ಅವರದ್ದು ಎಂಬ ನನ್ನ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಕುಮಾರಸ್ವಾಮಿ ಶನಿವಾರ ಇಲ್ಲಿ ಸವಾಲು ಹಾಕಿದರು.

‘ಆ ಧ್ವನಿ ಅವರದ್ದಲ್ಲ ಎಂದು ಅವರು ಸಾಬೀತು ಮಾಡಲಿ. ಆಗ ಅವರ ಬದಲಿಗೆ ನಾನೇ ರಾಜಕೀಯ ನಿವೃತ್ತಿ ಪಡೆಯುವೆ' ಎಂದರು.

‘ನಾನು ಸಿನಿಮಾ ನಿರ್ಮಾಪಕ ಆಗಿದ್ದುದು ನಿಜ. ಆದರೆ, ಇಂಥ ಆಡಿಯೊ ಸೃಷ್ಟಿಸುವ ಅವಶ್ಯಕತೆ ನನಗಿಲ್ಲ. ಸ್ವಲ್ಪ ತಿಳಿವಳಿಕೆ ಇರುವವರಿಗೂ ಆಡಿಯೊ ತುಣುಕಿನಲ್ಲಿರುವ ಧ್ವನಿ ಯಾರದ್ದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

* ಸರ್ಕಾರ ಅಸ್ಥಿರಗೊಳಿಸಲು ಕೇಂದ್ರ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಗೃಹ ಸಚಿವರು ಯತ್ನಿಸುತ್ತಿದ್ದು, ಅದಕ್ಕೆ ಪ್ರಧಾನಿ ಕುಮ್ಮಕ್ಕು ನೀಡುತ್ತಿದ್ದಾರೆ.

-ಎಚ್‌.ಕೆ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

* ಆಡಿಯೊದಲ್ಲಿರುವುದು ಯಡಿಯೂರಪ್ಪ ಅವರ ಧ್ವನಿ ಹೌದು, ಅಲ್ಲ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸತ್ಯಾಸತ್ಯತೆ ಅರಿಯಲು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗುವುದು

-ಎಂ.ಬಿ. ಪಾಟೀಲ, ಗೃಹ ಸಚಿವ

* ಯಡಿಯೂರಪ್ಪ ಅವರನ್ನು ಸಿಕ್ಕಿ ಹಾಕಿಸಲು ನಕಲಿ ಆಡಿಯೊ ಸಿ.ಡಿ ಸೃಷ್ಟಿ ಮಾಡಲಾಗಿದೆ. ಕುಮಾರಸ್ವಾಮಿ ಒಬ್ಬ ಬ್ಲ್ಯಾಕ್‌ ಮೇಲರ್

-ಆಯನೂರು ಮಂಜುನಾಥ್, ಬಿಜೆ‍ಪಿ ಶಾಸಕ

* ಆಡಿಯೊ ಕುರಿತಂತೆ ಸಭಾಧ್ಯಕ್ಷರು ಸೋಮವಾರ ತೀರ್ಪು ಪ್ರಕಟಿಸಲಿದ್ದಾರೆ. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.