ADVERTISEMENT

ಆಯುಷ್ಮಾನ್: ಕೈಗೆಟುಕದ ‘ದುಬಾರಿ’ ವೆಚ್ಚದ ಚಿಕಿತ್ಸೆ

ಮೂರು ವರ್ಷ ಕಳೆದರೂ ನಿವಾರಣೆಯಾಗದ ಗೊಂದಲ

ವರುಣ ಹೆಗಡೆ
Published 28 ನವೆಂಬರ್ 2021, 19:45 IST
Last Updated 28 ನವೆಂಬರ್ 2021, 19:45 IST
ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ
ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ   

ಬೆಂಗಳೂರು:ರಾಜ್ಯದ ಆರೂವರೆ ಕೋಟಿ ಜನರಿಗೂ ಆರೋಗ್ಯ ಭದ್ರತೆಯ ಭರವಸೆ ಒದಗಿಸಿದ್ದ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ಪಡೆಯುವುದು ರೋಗಿಗಳಿಗೆ ಸವಾಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ 60 ಮಂದಿಗೆ ಮಾತ್ರ ₹ 3 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಚಿಕಿತ್ಸೆಗಳು ಲಭಿಸಿವೆ.

ಜಗತ್ತಿನ ಅತಿದೊಡ್ಡ ‘ಆರೋಗ್ಯ ರಕ್ಷಾ ಕವಚ’ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಂಬಿಸಿಕೊಂಡಿರುವ ‘ಆಯುಷ್ಮಾನ್ ಭಾರತ್’ ಯೋಜನೆಯು ಆಯುಷ್ಮಾನ್ ಮಿಷನ್ ಅಡಿ‌ 2018ರಲ್ಲಿ ಪ್ರಾರಂಭವಾಗಿದೆ. ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರು ಹಾಗೂ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯಡಿ ನೋಂದಾಯಿಸಿದವರು ಈಯೋಜನೆಯ ಫಲಾನುಭವಿಗಳಾಗಿದ್ದಾರೆ. ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆ ಕಲ್ಪಿಸಲು ಅವಕಾಶವಿದೆ. ಆದರೆ, ಬೆರಳಣಿಕೆಯಷ್ಟು ಮಂದಿಗೆ ಮಾತ್ರದೊಡ್ಡ ಮೊತ್ತದ ವಿಮಾ ಹಣವನ್ನುರಾಜ್ಯದಲ್ಲಿ ಭರಿಸಲಾಗಿದೆ.‌

ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್‌ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ.

ADVERTISEMENT

ಬಿಪಿಎಲ್ ಕುಟುಂಬದ ಸದಸ್ಯರಿಗೆ ಯೋಜನೆಯಡಿ ಸಂಕೀರ್ಣ ಚಿಕಿತ್ಸೆಗಳನ್ನೂ ಉಚಿತವಾಗಿ ಒದಗಿಸಲು ಅವಕಾಶವಿದೆ.

ಎಪಿಎಲ್‌ ಕುಟುಂಬದ ಸದಸ್ಯರಿಗೆ ಚಿಕಿತ್ಸಾ ವೆಚ್ಚದ ಶೇ 30 ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಯೋಜನೆಯಡಿ ಮೂರು ವರ್ಷಗಳಲ್ಲಿ 21 ಲಕ್ಷಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ಒದಗಿಸಿದ್ದರೂ, ಹೆಚ್ಚಿನವು ತಾಲ್ಲೂಕು ಮಟ್ಟದಲ್ಲಿ ದೊರೆಯುವ ಚಿಕಿತ್ಸೆಯಾಗಿವೆ.

‌ಅವಕಾಶವಿದ್ದರೂ ಚಿಕಿತ್ಸೆಯಿಲ್ಲ:ಈ ಹಿಂದೆ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳು ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ನೇರವಾಗಿ ಅಗತ್ಯ ಚಿಕಿತ್ಸೆಗಳನ್ನು ಪಡೆಯಬಹುದಿತ್ತು.

ಆದರೆ, ಹೊಸ ಯೋಜನೆಯಡಿ ಚಿಕಿತ್ಸೆ ಪಡೆಯಲು ರೋಗಿಯು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು. ಅಲ್ಲಿ ಚಿಕಿತ್ಸೆ ಲಭ್ಯವಿರದಿದ್ದಲ್ಲಿ ಶಿಫಾರಸು ಮಾಡುವ ನೋಂದಾಯಿತ ಆಸ್ಪತ್ರೆಗೆ ಹೋಗಬೇಕು. ಇದರಿಂದಾಗಿ ಫಲಾನುಭವಿಗಳು ಚಿಕಿತ್ಸೆ ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ.

‘ತಜ್ಞ ವೈದ್ಯರು ಹಾಗೂ ಮೂಲಸೌಕರ್ಯದ ಕೊರತೆಯಿಂದ ಸಂಕೀರ್ಣ ಹಾಗೂ ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ರೋಗಿಗಳಿಗೆ ಒದಗಿಸುವುದು ಸವಾಲಾಗಿದೆ. ಸದ್ಯ ಜಾರಿಯಲ್ಲಿರುವ ವೈದ್ಯಕೀಯ ಕಾಯ್ದೆಗಳೂ ಚಿಕಿತ್ಸೆಗೆ ತೊಡಕಾಗಿವೆ. ತೃತೀಯ ಹಂತದ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆ ಒದಗಿಸಲು ಕೆಲವು ಅಡೆತಡೆಗಳಿವೆ. ಹೀಗಾಗಿ, ಯೋಜನೆಯಡಿ ಫಲಾನುಭವಿಗಳಿಗೆ ದುಬಾರಿ ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ಇಲ್ಲಿನ ಸರ್ಕಾರಿ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರೊಬ್ಬರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ನಿರಾಸಕ್ತಿ

‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ಚಿಕಿತ್ಸೆಗೂ ನಿರ್ದಿಷ್ಟ ದರ ನಿಗದಿ ಮಾಡಲಾಗಿದೆ. ಹೀಗಾಗಿ, ಹೆಸರು ನೋಂದಾಯಿಸಿಕೊಂಡು ಚಿಕಿತ್ಸೆ ಒದಗಿಸಲು ಹಲವು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ರಾಜ್ಯದಲ್ಲಿ 586 ಖಾಸಗಿ ಆಸ್ಪತ್ರೆಗಳು ಮಾತ್ರ ಸದ್ಯ ಯೋಜನೆಯಡಿ ನೋಂದಾಯಿಸಲ್ಪಟ್ಟಿವೆ. ನಿಗದಿಪಡಿಸಲಾಗಿರುವ ಪ್ಯಾಕೇಜ್ ಮೊತ್ತವು ಖಾಸಗಿ ವ್ಯವಸ್ಥೆಯಡಿ ನೀಡುತ್ತಿರುವ ದರದ ಅರ್ಧಕ್ಕಿಂತ ಕಡಿಮೆಯಿದೆ’ ಎನ್ನುವುದು ಆಸ್ಪತ್ರೆಗಳ ಆರೋಪ.

‘ಸರ್ಕಾರ ನಿಗದಿಪಡಿಸಿದ ದರ ಹಾಗೂ ನಾವು ಸದ್ಯ ಚಿಕಿತ್ಸೆ ಒದಗಿಸುತ್ತಿರುವ ದರದಲ್ಲಿ ಭಾರೀ ವ್ಯತ್ಯಾಸವಿದೆ. ಶೇ 60 ರಿಂದ ಶೇ 70 ರಷ್ಟು ಮೊತ್ತವನ್ನು ನಿಗದಿಪಡಿಸಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳು ನೋಂದಾಯಿಸಲ್ಪಡುತ್ತಿದ್ದವು. ಪ್ಯಾಕೇಜ್ ದರವನ್ನು ಪರಿಷ್ಕರಿಸಬೇಕು. ಹಾಲಿ ಪ್ಯಾಕೇಜ್ ಮೊತ್ತದ ಪಾವತಿಯೂ ವಿಳಂಬ ಆಗುತ್ತಿದೆ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

* ಕೋವಿಡ್ ಕಾಣಿಸಿಕೊಂಡ ಬಳಿಕವೂ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಮಸ್ಯೆಯಾಗದಂತೆ ಚಿಕಿತ್ಸೆ ಒದಗಿಸಲಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು

- ಡಾ. ಅಪ್ಪಾಸಾಹೇಬ್ ಎಸ್. ನರಟ್ಟಿ, ಆರೋಗ್ಯ ಇಲಾಖೆ ನಿರ್ದೇಶಕ

ಯೋಜನೆಯಡಿ ಬರುವ ಆಸ್ಪತ್ರೆಗಳು

24; ಜಿಲ್ಲಾ ಆಸ್ಪತ್ರೆಗಳು

20; ವೈದ್ಯಕೀಯ ಕಾಲೇಜು ಆಸ್ಪತ್ರೆಗಳು

16; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು

148; ತಾಲ್ಲೂಕು ಆಸ್ಪತ್ರೆಗಳು

211; ಸಮುದಾಯ ಆರೋಗ್ಯ ಕೇಂದ್ರಗಳು

2,440; ಪ್ರಾಥಮಿಕ ಆರೋಗ್ಯ ಕೇಂದ್ರಗಳು

22; ಹೆರಿಗೆ ಆಸ್ಪತ್ರೆಗಳು

586; ಖಾಸಗಿ ಆಸ್ಪತ್ರೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.