ADVERTISEMENT

ಅಯ್ಯಪ್ಪ ಹತ್ಯೆ: ಮತ್ತೆ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 20:04 IST
Last Updated 18 ಅಕ್ಟೋಬರ್ 2019, 20:04 IST
   

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಸಂಬಂಧ ಮತ್ತೆ ಮೂವರನ್ನು ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಜೆ.ಸಿ. ನಗರದಫಯಾಜ್, ಗಣೇಶ್ ಹಾಗೂ ಮಂಜು ಬಂಧಿತರು. ಹತ್ಯೆಯ ಪ್ರಮುಖ ಆರೋಪಿ ಸೂರಜ್‌ ಸಿಂಗ್‌ನ ಸ್ನೇಹಿತರಾಗಿರುವ ಈಮೂವರು, ಹಣದ ಆಸೆಗಾಗಿ ಕೃತ್ಯ ಎಸಗಿರುವಾಗಿ ಹೇಳುತ್ತಿದ್ದಾರೆ. ಆ ಬಗ್ಗೆ ಹೇಳಿಕೆಯನ್ನೂ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಲಯನ್ಸ್ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಸುಧೀರ್ ಅಂಗೂರ್, ಸಹೋದರ ಮಧುಕರ್ ಅಂಗೂರ್ ಹಾಗೂಅಯ್ಯಪ್ಪ ಅವರಿಬ್ಬರನ್ನು ಹತ್ಯೆ ಮಾಡಲೆಂದು ₹ 1 ಕೋಟಿ ಸುಪಾರಿ ನೀಡಿದ್ದ. ₹ 25 ಲಕ್ಷ ಮುಂಗಡವಾಗಿ ಪಡೆದಿದ್ದ ಸೂರಜ್, ತನ್ನ ಸ್ನೇಹಿತರಾದಫಯಾಜ್, ಗಣೇಶ್ ಹಾಗೂ ಮಂಜು ಜೊತೆ ಸೇರಿ ಹತ್ಯೆಗೆ ದಿನ ನಿಗದಿ ಮಾಡಿದ್ದ.’

ADVERTISEMENT

‘ಸೂರಜ್‌ ಹಾಗೂ ಸಹಚರರು, ಜೆ.ಸಿ.ನಗರದಲ್ಲಿ ವಾಸವಿದ್ದರು. ‘ಶ್ರೀರಾಮ ಯುವಕರ ಸಂಘ’ ಕಟ್ಟಿಕೊಂಡಿದ್ದ ಅವರೆಲ್ಲ, ಹಬ್ಬಗಳ ದಿನದಂದು ಸ್ಥಳೀಯ ಜನರೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ, ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ’ ಎಂದು ಮೂಲಗಳು ಹೇಳಿವೆ.

ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದ: ‘ಸುಧೀರ್ ಕೊಟ್ಟಿದ್ದ ₹ 20 ಲಕ್ಷವನ್ನು ಸೂರಜ್, ತನ್ನ ಸ್ನೇಹಿತರಿಗೆ ಹಂಚಿಕೆ ಮಾಡಿದ್ದ. ಕೊಲೆ ಬಳಿಕವೇ ಉಳಿದ ಹಣವನ್ನು ನೀಡುವುದಾಗಿ ಹೇಳಿದ್ದ’ ಎಂದು ಮೂಲಗಳು ತಿಳಿಸಿವೆ.

‘ಅಯ್ಯಪ್ಪ ದೊರೆ ಅವರು ಎಚ್ಎಂಟಿ ಮೈದಾನಕ್ಕೆ ವಾಯುವಿಹಾರಕ್ಕೆ ಬರುತ್ತಾರೆಂಬುದನ್ನು ತಿಳಿದುಕೊಂಡಿದ್ದ ಆರೋಪಿಗಳು, ಅದೇ ಸಮಯದಲ್ಲಿ ಕೊಲೆ ಮಾಡಲು ನಿರ್ಧರಿಸಿದ್ದರು. ಇದೇ 15ರಂದು ಬೆಳಿಗ್ಗೆ ಹೋಟೆಲೊಂದರಲ್ಲಿ ಕೊಠಡಿ ಕಾಯ್ದಿರಿಸಿ ಆರೋಪಿಗಳೆಲ್ಲರೂ ಉಳಿದುಕೊಂಡಿದ್ದರು. ರಾತ್ರಿ ಅಯ್ಯಪ್ಪ ಅವರನ್ನು ಕೊಲೆ ಮಾಡಿದ ಬಳಿಕ ಸುಧೀರ್ ಅಂಗೂರ್ ಮನೆಗೆ ಹೋಗಿದ್ದ ಆರೋಪಿಗಳು, ಅಲ್ಲಿಂದ ಪುನಃ ಹೋಟೆಲ್ ಕೊಠಡಿಗೆ ವಾಪಸು ಬಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.