ADVERTISEMENT

ಆರೋಪಿಗಳಿಗೆ ಆಶ್ರಯ ನೀಡಿದ್ದವರ ಬಂಧನ

ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಹತ್ಯೆ ಪ್ರಕರಣ; ಮತ್ತೆ ಏಳು ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 4:16 IST
Last Updated 26 ಅಕ್ಟೋಬರ್ 2019, 4:16 IST
ಫಯಾಜ್
ಫಯಾಜ್   

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ (52) ಹತ್ಯೆ ಪ್ರಕರಣ ಸಂಬಂಧ ವಿಶ್ವವಿದ್ಯಾಲಯದ ಕುಲಪತಿ ಸುಧೀರ್ ಅಂಗೂರ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿರುವ ಆರ್‌.ಟಿ.ನಗರ ಪೊಲೀಸರು, ಮತ್ತೆ ಏಳು ಮಂದಿಯನ್ನು ಸೆರೆ ಹಿಡಿದಿದ್ದಾರೆ.

‘ಆರ್‌.ಟಿ. ನಗರದ ಎಚ್‌.ಎಂ.ಟಿ ಮೈದಾನ ಬಳಿ ಇದೇ 15ರಂದು ಅಯ್ಯಪ್ಪ ಅವರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳು ಹಾಗೂ ಅವರಿಗೆ ಆಶ್ರಯ ನೀಡಿದ್ದವರನ್ನೂ ಇದೀಗ ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹತ್ಯೆ ನಡೆದು 24 ಗಂಟೆಯಲ್ಲೇ ಆರೋಪಿ ಸುಧೀರ್ ಅಂಗೂರ್ ಹಾಗೂ ವಿ.ವಿ ನೌಕರ ಸೂರಜ್ ಸಿಂಗ್‌ನನ್ನು ಬಂಧಿಸಲಾಗಿತ್ತು. ಇನ್ನೊಬ್ಬ ಆರೋಪಿ ಗಣೇಶ್‌ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿತ್ತು. ಜಯಮಹಲ್ ನಿವಾಸಿ ಟಿ. ಕಾಂತರಾಜು ಅಲಿಯಾಸ್ ಕಾಟಪ್ಪ (28), ಜೆ.ಸಿ.ನಗರದ ಸುನೀಲ್‌ರಾವ್ ಅಲಿಯಾಸ್ ಅಪ್ಪು, ವಿನಯ್ (24) ಹಾಗೂ ಆರ್‌.ಟಿ.ನಗರದ ಫಯಾಜ್ (29) ಎಂಬುವರನ್ನು ಸದ್ಯ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಆರ್‌.ಟಿ.ನಗರದ ಅರುಣ್‌ಕುಮಾರ್ (40), ಕನಕನಗರದ ರಿಜ್ಮಾನಾ (38) ಹಾಗೂ ಕೊಡಿಗೇಹಳ್ಳಿಯ ಸಲ್ಮಾ (28) ಎಂಬುವರು ಆರೋಪಿಗಳಿಗೆ ಆಶ್ರಯ ನೀಡಿದ್ದರು. ಕೊಲೆಗೆ ಸಹಕಾರ ನೀಡಿದ ಆರೋಪದಡಿ ಅವರನ್ನೂ ಸೆರೆ ಹಿಡಿಯಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿದೆ’ ಎಂದು ಹೇಳಿದರು.

ಬಂಧಿತೆ ಸೂರಜ್‌ನ ಗೆಳತಿ: ‘ಬಂಧಿತೆ ಸಲ್ಮಾ, ಆರೋಪಿ ಸೂರಜ್‌ನ ಗೆಳತಿ. ಅವರಿಬ್ಬರ ನಡುವೆ ಆತ್ಮಿಯತೆ ಇತ್ತು. ಕೊಲೆ ಮಾಡಿದ ಬಳಿಕ ಆರೋಪಿಯೊಬ್ಬನಿಗೆ ಆಕೆ ಆಶ್ರಯ ನೀಡಿದ್ದಳು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಜೆ.ಸಿ.ನಗರದಲ್ಲಿ ‘ಶ್ರೀರಾಮ ಯುವಕ ಸಂಘ’ ಕಟ್ಟಿಕೊಂಡಿದ್ದ ಸೂರಜ್, ಆಗಾಗ ಸಲ್ಮಾ ಮನೆಗೂ ಹೋಗಿ ಬರುತ್ತಿದ್ದ. ಅಯ್ಯಪ್ಪ ಅವರ ಕೊಲೆಗೆ ಸಂಚು ರೂಪಿಸಿದ್ದ ಹಾಗೂ ಕೆಲಸ ಮುಗಿದರೆ ಹೆಚ್ಚಿನ ಹಣ ಬರುವ ಬಗ್ಗೆಯೂ ಹೇಳಿದ್ದ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.