ADVERTISEMENT

ಬಿ– ಖಾತಾ ವಿತರಣೆ: ಮೂರು ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 23:56 IST
Last Updated 14 ಮೇ 2025, 23:56 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಬೆಂಗಳೂರು: ರಾಜ್ಯದ ವಿವಿಧ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ–ಖಾತಾ ನೀಡುವ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಯಾವುದೇ ಪರವಾನಗಿ ಇಲ್ಲದೇ, ಭೂಪರಿವರ್ತನೆ ಮಾಡಿಸಿಕೊಳ್ಳದೇ, ನಕ್ಷೆ ಮಂಜೂರಾತಿ ಮಾಡಿಕೊಳ್ಳದೇ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದರೆ ಅಂತಹವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿ–ಖಾತಾ ನೀಡಿ ಸಕ್ರಮಗೊಳಿಸಲು ನಿರ್ಣಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ನಾಗರಿಕರಿಗೆ ಒಂದು ಬಾರಿಯ ಅವಕಾಶವನ್ನು ಮೇ 10 ರವರೆಗೆ ನೀಡಲಾಗಿತ್ತು. ವಿವಿಧ ಮಹಾನಗರ ಪಾಲಿಕೆಗಳು ಮತ್ತು ನಗರ ಪ್ರದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ ಇಂತಹ ಅನಧಿಕೃತ ಕಟ್ಟಡಗಳು, ಮನೆಗಳು, ನಿವೇಶನಗಳಿವೆ. ಈವರೆಗೆ ಸುಮಾರು 10 ಲಕ್ಷ ಆಸ್ತಿಗಳಿಗೆ ಬಿ–ಖಾತಾ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ 2 ಲಕ್ಷ ಆಸ್ತಿಗಳಿಗೆ ಬಿ–ಖಾತೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಹಂತಹಂತವಾಗಿ ಬಿ–ಖಾತಾ ವಿತರಿಸಲಾಗುವುದು ಎಂದಿದ್ದಾರೆ.

ADVERTISEMENT

ಜಿಪಿಎ, ಕರಾರುದಾರರಿಗೂ ಸೌಲಭ್ಯ:

ನಿವೇಶನ ಅಥವಾ ಕಟ್ಟಡಗಳನ್ನು ಖರೀದಿಸಲು ಮುಂದಾಗಿ ಜಿಪಿಎ ಅಥವಾ ಒಪ್ಪಂದ ಮಾಡಿಕೊಂಡಿರುವ ನಾಗರಿಕರಿಗೂ ಬಿ–ಖಾತಾ ವಿತರಣೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಸಚಿವ ಸುರೇಶ್‌ ತಿಳಿಸಿದ್ದಾರೆ.

‘ಈ ಸಂಬಂಧ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇದರಿಂದ ಜಿಪಿಎ ಅಥವಾ ಕರಾರುದಾರರಿಗೂ ಅನುಕೂಲವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.