ADVERTISEMENT

‘ರಾಮಮಂದಿರಕ್ಕೆ ಪ್ರಧಾನಿಯೇ ಶಿಲಾನ್ಯಾಸ ನೆರವೇರಿಸಲಿ’

ಯೋಗ ಗುರು ಬಾಬಾ ರಾಮದೇವ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 22:45 IST
Last Updated 15 ನವೆಂಬರ್ 2019, 22:45 IST
ಉಡುಪಿಯ ಕೃಷ್ಣಮಠದಲ್ಲಿ ಯೋಗಗುರು ಬಾಬಾ ರಾಮದೇವ್ ಯೋಗ ಭಂಗಿ ಪ್ರದರ್ಶಿಸಿದರು
ಉಡುಪಿಯ ಕೃಷ್ಣಮಠದಲ್ಲಿ ಯೋಗಗುರು ಬಾಬಾ ರಾಮದೇವ್ ಯೋಗ ಭಂಗಿ ಪ್ರದರ್ಶಿಸಿದರು   

ಉಡುಪಿ: ರಾಮನವಮಿಯ ದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಅಯೋಧ್ಯೆಯಲ್ಲಿರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಬೇಕು ಎಂದು ಯೋಗಗುರು ಬಾಬಾ ರಾಮದೇವ್ ಅಭಿಪ್ರಾಯಪಟ್ಟರು.

ಉಡುಪಿಯಲ್ಲಿ ನ.16ರಿಂದ ನಡೆಯುವ ಯೋಗ ಶಿಬಿರದ ಪೂರ್ವಭಾವಿಯಾಗಿ ಕೃಷ್ಣಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

ಕ್ರೈಸ್ತರ ವ್ಯಾಟಿಕನ್‌ ಸಿಟಿಯಂತೆ, ಮುಸ್ಲಿಮರ ಮೆಕ್ಕಾ–ಮದೀನಾದಂತೆ, ಸಿಖ್ಖರ ಸ್ವರ್ಣಮಂದಿರದ ಮಾದರಿಯಲ್ಲಿ ಅಯೋಧ್ಯೆಯನ್ನು ಹಿಂದೂಗಳ ಪವಿತ್ರ ಕ್ಷೇತ್ರವಾಗಿ ನಿರ್ಮಾಣ ಮಾಡಬೇಕು. ಜ್ಞಾನ ಮಂದಿರ, ವಿದ್ಯಾಮಂದಿರದ ಜತೆಗೆ ದೇಶದ ಭವ್ಯ ಪರಂಪರೆ ಅನಾವರಣವಾಗಬೇಕು ಎಂದು ಹೇಳಿದರು.

ADVERTISEMENT

ವಿವಾದಿನ ಜಾಗದಲ್ಲಿ ಮಸೀದಿ ಬೇಡ:ಅಯೋಧ್ಯೆಯ ವಿವಾದಿತ 67 ಎಕರೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ನೀಡುವುದು ಸೂಕ್ತವಲ್ಲ. ಭವಿಷ್ಯದಲ್ಲಿ ಸಂಘರ್ಷಗಳಾಗುವ ಸಾಧ್ಯತೆಗಳಿವೆ. ಹಾಗಾಗಿ, ಅಯೋಧ್ಯೆಯ ಒಂದು ಭಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಭೂಮಿ ನೀಡುವುದು ಒಳಿತು ಎಂದರು.‌

ಸಂಸದ ಅಸಾದುದ್ದೀನ್ ಓವೈಸಿ ಹಿಂದೂ–ಮುಸ್ಲಿಮರ ಮಧ್ಯೆ ದ್ವೇಷದ ಕಿಡಿ ಹಚ್ಚುಲು ವಿವಾದಿತ ಹೇಳಿಕೆ ನೀಡುತ್ತಾನೆ. ಹಿಂದೆ ಎರಡು ಕೋಮುಗಳ ಮಧ್ಯೆ ನಡೆದ ಕಹಿ ಘಟನೆಗಳನ್ನು ಈಗ ಕೆದುಕುವ ಅವಶ್ಯಕತೆ ಇಲ್ಲ.ಹಿಂದೂ ಹಾಗೂ ಮುಸ್ಲಿಮರ ಡಿಎನ್‌ಎ ಒಂದೇ. ಎಲ್ಲರೂ ಏಕತೆಯ ಮಂತ್ರ ಜಪಿಸಬೇಕಿದೆ. ಬುದ್ಧಿ ಸ್ಥಿಮಿತದಲ್ಲಿಲ್ಲದ ಓವೈಸಿ ಪಾಕಿಸ್ತಾನದ ಎರಡನೇ ಜಿನ್ನಾ ಆಗಲು ಹೊರಟಿದ್ದಾನೆ ಎಂದು ರಾಮ್‌ದೇವ್ ಕುಟುಕಿದರು.

ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ನಿರ್ಮಾಣವಾಗಬೇಕು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥರು ಸೇರಿದಂತೆ ದೇಶದ ಪ್ರಮುಖ ಸ್ವಾಮೀಜಿಗಳು ಸಂಕಲ್ಪ ತೊಟ್ಟಿದ್ದರು. ಮಹಾನ್ ಸಂತರಿಗೆ ರಾಮಜನ್ಮಭೂಮಿ ನಿರ್ಮಾಣ ಸಂಬಂಧ ರಚನೆಯಾಗುವ ಟ್ರಸ್ಟ್‌ನಲ್ಲಿ ಅವಕಾಶ ಸಿಗಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.