ADVERTISEMENT

ಕಾಂಗ್ರೆಸ್ ಸರ್ಕಾರದಿಂದ ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 7:34 IST
Last Updated 23 ಡಿಸೆಂಬರ್ 2024, 7:34 IST
<div class="paragraphs"><p>ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ</p></div>

ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

   

– ಪ್ರಜಾವಾಣಿ ಚಿತ್ರ

ಹಾಸನ: ಕರ್ನಾಟಕದಲ್ಲಿ ಕೆಟ್ಟ ರಾಜಕೀಯಕ್ಕೆ ನಾಂದಿ ಹಾಡುತ್ತಿದೆ. ನಮ್ಮ ಪೂರ್ವಿಕರು ಮಾಡಿರುವ ಪರಂಪರೆಯನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ADVERTISEMENT

ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪೊಲೀಸರ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಈ ಸರ್ಕಾರದ ಸಚಿವರು ನಿರ್ದೇಶನ ನೀಡುವ ಮೂಲಕ ಪೊಲೀಸರಿಂದ ಬೇಕಾಬಿಟ್ಟಿ ಪ್ರಕರಣ ದಾಖಲಿಸಲಾಗುತ್ತಿದೆ. ಈ ರೀತಿಯ ದುರುಪಯೋಗ, ಉಲ್ಲಂಘನೆಗಳು ಸರ್ಕಾರದಿಂದ ಆಗುತ್ತಿವೆ ಎಂದರು.

ರಾತ್ರಿಯಿಡೀ ಒಬ್ಬರ ಜನಪ್ರತಿನಿಧಿಯನ್ನು ಸುತ್ತಾಡಿಸುವ ಅಗತ್ಯ ಏನಿತ್ತು? ಕಾನೂನುನಡಿ ಸೂಕ್ತ ಹೋರಾಟ ನಡೆಸಿದಲ್ಲಿ, ತಪ್ಪು ಮಾಡಿರುವ ಅಧಿಕಾರಿಗಳು ಅಮಾನತು ಆಗುತ್ತಾರೆ ಎಂದರು.

ರಾಜ್ಯಸಭೆಯಲ್ಲಿ ಕೇಂದ್ರದ ಗೃಹ ಸಚಿವರು ಕೆಲವು ವಿಷಯ ಪ್ರಸ್ತಾಪಿಸಿದ್ದು, ಅದು ರಾಜ್ಯಸಭೆಗೆ ಸಂಬಂಧಿಸಿದ ವಿಷಯ. ಅದನ್ನು ವಿಧಾನ ಮಂಡಲದಲ್ಲಿ ಚರ್ಚಿಸುವ ಅಗತ್ಯ ಏನಿತ್ತು? ಉತ್ತಮ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ, ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ವಿರೋಧಿಗಳನ್ನು ಸದೆಬಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕಲಬುರ್ಗಿಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ. ಅದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅನುಮೋದನೆ ಕೊಟ್ಟಿದ್ದೆ. ಬಿಜೆಪಿ ಸರ್ಕಾರದಲ್ಲಿ ₹180 ಕೋಟಿ ಕೊಡಲಾಗಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಬಾಣಂತಿಯರ ಸಾವುಗಳು ಸಂಭವಿಸುತ್ತಿವೆ, ಅದನ್ನು ಸರಿಪಡಿಸಲಾಗದವರು, ಇದೀಗ ಕಲಬುರ್ಗಿ, ಮೈಸೂರಿನಲ್ಲಿ ನಿಮ್ಹಾನ್ಸ್‌ ಶಾಖೆ ತೆರೆಯುವುದಾಗಿ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹಾಸನದ ಜಿಲ್ಲೆಯ ಅಭಿವೃದ್ಧಿ ಆಗಿದ್ದರೆ ಅದು ಎಚ್.ಡಿ. ದೇವೇಗೌಡರು, ಎಚ್‌.ಡಿ. ರೇವಣ್ಣ ಅವರ ಪರಿಶ್ರಮದಿಂದ. ನಾನು ಮುಖ್ಯಮಂತ್ರಿ ಆಗಿದ್ದಾಗ, ಅನೇಕ ಕೊಡುಗೆಗಳನ್ನು ಜಿಲ್ಲೆಗೆ ನೀಡಲಾಗಿದೆ. ಜನರನ್ನು ಲೂಟಿ ಮಾಡಿದವರು ಸಾಕ್ಷಿ ಗುಡ್ಡೆಗಳನ್ನು ತೋರಿಸಬಹುದು. ಆದರೆ, ನಾವು ಅಭಿವೃದ್ಧಿಯ ಸಾಕ್ಷಿಗುಡ್ಡೆ ತೋರಿಸಲಷ್ಟೇ ಸಾಧ್ಯ ಎಂದು ತಿರುಗೇಟು ನೀಡಿದರು.

ನಿಖಿಲ್‌ ಕುಮಾರಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಅವರು, ಅವರೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾರೆ’ ಎಂದಷ್ಟೇ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.