ADVERTISEMENT

ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 7:31 IST
Last Updated 17 ಫೆಬ್ರುವರಿ 2020, 7:31 IST
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಮೂವರು ಆರೋಪಿಗಳ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ (ಚಿತ್ರ: ತಾಜುದ್ದೀನ್ ಆಜಾದ್)
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಮೂವರು ಆರೋಪಿಗಳ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ (ಚಿತ್ರ: ತಾಜುದ್ದೀನ್ ಆಜಾದ್)   

ಹುಬ್ಬಳ್ಳಿ: ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದ ಇಲ್ಲಿನ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಪಾಕ್ ಪರವಾಗಿ ಘೋಷಣೆ ಕೂಗಿದ ಆರೋಪದ ಮೇಲೆಕಾಶ್ಮಿರದ ಬಾರಮುಲ್ಲಾದ ಅಮೀರ್‌ ವಾನಿ, ತಾಲೀಬ್‌ ಮಜೀದ್‌ ಮತ್ತು ಬಾಸಿತ್‌ ಸೋಫಿ ವಿರುದ್ಧ ಜಾಮೀನು ರಹಿತ ಐಪಿಸಿ 153ಎ (ಬಿ), 153ಬಿ (ಸಿ) ಮತ್ತು 505 (2) ಪ್ರಕರಣ ದಾಖಲಿಸಿ, ಕೋಮು ಸೌಹಾರ್ದ ಕದಡುವ ಹಾಗೂ ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಸಿ.ಆರ್.ಪಿ.ಸಿ 169 ಕಾಯ್ದೆ ಅಡಿಯಲ್ಲಿ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿತ್ತು.

ಇದರಿಂದ ಆಕ್ರೋಶಗೊಂಡ ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಮುಖಂಡರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದ್ದರು. ರಾಜಕೀಯ ಮುಖಂಡರು ಸಹ ಪೊಲೀಸ್ ಇಲಾಖೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಮೂವರನ್ನು ಮತ್ತೆ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿತ್ತು.

ನ್ಯಾಯಾಧೀಶರು ನ್ಯಾಯಾಂಗವಶಕ್ಕೆ ನೀಡಿದ ನಂತರ ಆರೋಪಿಗಳನ್ನು ಕರೆದೊಯ್ಯವಾಗ ಬಜರಂಗದಳ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಡೆಯಲು ಮುಂದಾದಾಗ ವಾಗ್ವಾದ ನಡೆದು ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸ್ ವ್ಯಾನ್ ತಡೆದು ಪ್ರತಿಭಟನೆ ನಡೆಸಿದರು. ನಂತರ ಭದ್ರತೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.