ADVERTISEMENT

ಬಲಿಜ ಸಮುದಾಯ: ‘ಪ್ರವರ್ಗ 2ಎ’ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 20:39 IST
Last Updated 5 ಮಾರ್ಚ್ 2021, 20:39 IST
ವೆಂಕಟೇಶ್‌
ವೆಂಕಟೇಶ್‌   

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ‘ಪ್ರವರ್ಗ 2ಎ’ಗೆ ಸೇರ್ಪಡೆಯಾಗಿರುವ ಬಲಿಜ ಸಮುದಾಯವನ್ನು ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲೂ ಇದೇ ವರ್ಗಕ್ಕೆ ಸೇರಿಸಬೇಕು ಎಂದು ಮೈಸೂರು ಯೋಗಿನಾರೇಯಣ ಬಣಜಿಗ (ಬಲಿಜ) ಸಂಘ ಶುಕ್ರವಾರ ಇಲ್ಲಿ ಒತ್ತಾಯಿಸಿದೆ.

‘‌ಹಾವನೂರು ಆಯೋಗವು ಮಾಡಿದ ಶಿಫಾರಸ್ಸಿನಂತೆ ಬಲಿಜ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಲಾಗಿತ್ತು. ಆದರೆ, ರಾಜಕೀಯ ಒತ್ತಡದಿಂದ, ಅಸಾಂವಿಧಾನಿಕವಾಗಿ 1994ರಲ್ಲಿ 3ಎಪ್ರವರ್ಗಕ್ಕೆ ಸೇರಿಸಲಾಯಿತು. ಸತತ ಒತ್ತಾಯದ ನಂತರ, 2011ರಲ್ಲಿ ಶಿಕ್ಷಣದ ಉದ್ದೇಶಕ್ಕೆ ಮಾತ್ರ 2ಎ ಪ್ರವರ್ಗದ ಸೌಲಭ್ಯ ಕಲ್ಪಿಸಲಾಯಿತು’ ಎಂದ ಸಂಘದ ಗೌರವ ಅಧ್ಯಕ್ಷ ಎಚ್.ಎ.ವೆಂಕಟೇಶ್, ಈಗ ಸಂಪೂರ್ಣವಾಗಿ ‘ಪ್ರವರ್ಗ 2ಎ’ಕ್ಕೇ ಸೇರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ನಾವೇನು ಹೊಸ ಮೀಸಲಾತಿಗೆ ಬೇಡಿಕೆ ಇಟ್ಟಿಲ್ಲ. ಈ ಹಿಂದೆ ನಮಗೆ ಕೊಟ್ಟಿದ್ದ ನಮಗೆ ‘ಪ್ರವರ್ಗ 2ಎ’ ಮೀಸಲಾತಿಯನ್ನು ಎಲ್ಲಾ ಕ್ಷೇತ್ರದಲ್ಲೂ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಬಲಿಜ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಇನ್ನೂ ಹಿಂದುಳಿದಿದೆ’ ಎಂದು ಹೇಳಿದರು.‌

ADVERTISEMENT

‘ರಾಜ್ಯದಲ್ಲಿರುವ ಮೀಸಲಾತಿ ನಿಜಕ್ಕೂ ಅವೈಜ್ಞಾನಿಕ ಹಾಗೂ ಅಸಾಂವಿಧಾನಿಕವಾಗಿದೆ. ದೇವರಾಜ ಅರಸು ನಂತರ ಯಾವೊಬ್ಬ ಮುಖ್ಯಮಂತ್ರಿಯೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಚರ್ಚಿಸಿಲ್ಲ. ಯಾವುದೇ ಆಯೋಗದ ಶಿಫಾರಸು ಇಲ್ಲದೇ, ಒಂದು ಸಾಮಾನ್ಯ ವರ್ಗಾವಣೆ ಆದೇಶದಂತೆ ಸಮುದಾಯವನ್ನು ಒಂದು ಪ್ರವರ್ಗದಿಂದ ಮತ್ತೊಂದು ಪ್ರವರ್ಗಕ್ಕೆ ವರ್ಗಾಯಿಸಲಾಗುತ್ತಿದೆ’ ಎಂದು ಅವರು ಹರಿಹಾಯ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.