
ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ಮತ್ತೆ ಅವಕಾಶ ನೀಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಮಾನವ-ಹುಲಿ ಸಂಘರ್ಷದ ಕಾರಣದಿಂದಾಗಿ 2025ರ ನ.7ರಂದು ಸಫಾರಿ ಸ್ಥಗಿತಗೊಳಿಸಲಾಗಿತ್ತು. ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿರ್ಣಯಿಸಲು ಸಮಿತಿ ರಚಿಸಿ, ಹಂತ ಹಂತವಾಗಿ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಲು ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಜ.2ರಂದು ಸೂಚನೆ ನೀಡಲಾಗಿತ್ತು. ಸಮಿತಿಯು ಮಧ್ಯಂತರ ವರದಿ ನೀಡಿದೆ. ಈ ವರದಿಯಲ್ಲಿ ಮಾಡಲಾದ ಶಿಫಾರಸಿನಂತೆ ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದರು. ಅದರಂತೆ ಷರತ್ತು ಬದ್ಧ ಅನುಮತಿ ನೀಡಿ ಶನಿವಾರ ಆದೇಶ ಹೊರಡಿಸಲಾಗಿದೆ.
ಮೂರು ವಲಯಗಳಲ್ಲಿ ಒಂದು ದಿನದಲ್ಲಿ ಇಂತಿಷ್ಟೇ ಭೇಟಿಗೆ ಅವಕಾಶ ನೀಡಿ ಮಿತಿ ಹೇರಲಾಗಿದೆ.
ಬಂಡೀಪುರ ಪರಿಸರ ಪ್ರವಾಸೋದ್ಯಮ ವಲಯದಲ್ಲಿ ಅರಣ್ಯ ಇಲಾಖೆಗೆ 19 ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗೆ (ಜೆಎಲ್‌ಆರ್) 12 ಒಟ್ಟು 31 ಭಾರಿ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಪ್ರತಿ ಭೇಟಿಯ ಅವಧಿ ಎರಡೂವರೆ ಗಂಟೆ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6.30ರಿಂದ 9 ಹಾಗೂ ಮಧ್ಯಾಹ್ನ 3.30ರಿಂದ 6ರ ವರೆಗೆ ಸಫಾರಿಗೆ ಅವಕಾಶ ಇರಲಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸುಂಕದಕಟ್ಟೆ ಪರಿಸರ ಪ್ರವಾಸೋದ್ಯಮ ವಲಯದಲ್ಲಿ ಅರಣ್ಯ ಇಲಾಖೆಗೆ 13 ಹಾಗೂ ಜೆಎಲ್‌ಆರ್‌ಗೆ 23 ಒಟ್ಟು 36 ಭಾರಿ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಪ್ರತಿ ಭೇಟಿಯ ಅವಧಿ ಮೂರು ಗಂಟೆ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6.30ರಿಂದ 9.30 ಹಾಗೂ ಮಧ್ಯಾಹ್ನ 3ರಿಂದ 6ರ ವರೆಗೆ ಸಫಾರಿಗೆ ಅವಕಾಶ ಇರಲಿದೆ.
ನಾಗರಹೊಳೆ ಪರಿಸರ ಪ್ರವಾಸೋದ್ಯಮ ವಲಯದಲ್ಲಿ ಅರಣ್ಯ ಇಲಾಖೆಗೆ 6 ಹಾಗೂ ಜೆಎಲ್‌ಆರ್‌ಗೆ 8 ಒಟ್ಟು 14 ಭಾರಿ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಪ್ರತಿ ಭೇಟಿಯ ಅವಧಿ ಎರಡು ಗಂಟೆ ನಿಗದಿಪಡಿಸಲಾಗಿದೆ. ಬೆಳಿಗ್ಗೆ 7ರಿಂದ 9 ಹಾಗೂ ಮಧ್ಯಾಹ್ನ 3ರಿಂದ 5ರ ವರೆಗೆ ಸಫಾರಿಗೆ ಅವಕಾಶ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.