ADVERTISEMENT

ಬೆಂಗಳೂರು | ಡಿ.9ಕ್ಕೆ ರಾಷ್ಟ್ರೀಯ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 18:41 IST
Last Updated 8 ಡಿಸೆಂಬರ್ 2023, 18:41 IST
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ (ಎಡದಿಂದ ಮೊದಲನೆಯವರು), ನೂತನ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಹಾಗೂ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾಧ್ಯಮಗೋಷ್ಠಿಯಲ್ಲಿ ಲೋಕ ಅದಾಲತ್‌ ವಿವರ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ (ಎಡದಿಂದ ಮೊದಲನೆಯವರು), ನೂತನ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಹಾಗೂ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾಧ್ಯಮಗೋಷ್ಠಿಯಲ್ಲಿ ಲೋಕ ಅದಾಲತ್‌ ವಿವರ ನೀಡಿದರು.   

ಬೆಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಇದೇ 9ರಂದು ‘ಸರ್ವರಿಗೂ ನ್ಯಾಯ‘ ಎಂಬ ಘೋಷ ವಾಕ್ಯದೊಂದಿಗೆ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿದೆ.

ಈ ವಿಷಯವನ್ನು ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರದ ನೂತನ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಪರಸ್ಪರ ರಾಜಿ-ಸಂಧಾನದ ಮೂಲಕ ಉಭಯ ಪಕ್ಷಕಾರರು ಒಪ್ಪಿ ತಮ್ಮ ವ್ಯಾಜ್ಯಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ವಾಜ್ಯಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು. ಸರ್ಕಾರ ಮತ್ತು ಕಕ್ಷಿದಾರರ ಆರ್ಥಿಕ ಹೊರೆಯೂ ಇಲ್ಲವಾಗುತ್ತದೆ‘ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ತಿಳಿಸಿದರು.

ADVERTISEMENT

2.60 ಲಕ್ಷ ಪ್ರಕರಣ: ‘ರಾಜ್ಯದಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ‍ಪ್ರಮಾಣ ಇನ್ನಷ್ಟು ಏರಿಕೆಯಾಗಬಹುದು. ಇದೇ 9ರಂದು ಬೆಂಗಳೂರು, ಧಾರವಾಡ, ಕಲಬುರಗಿಯ ಹೈಕೋರ್ಟ್‌ ಪೀಠಗಳೂ ಸೇರಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣಾ ಪೀಠಗಳಲ್ಲಿ ಲೋಕ್ ಅದಾಲತ್ ಕಲಾಪ ನಡೆಸಲಿದೆ‘ ಎಂದು ದಿನೇಶ್‌ ಕುಮಾರ್ ವಿವರಿಸಿದರು.

ಯಾವ ಪ್ರಕರಣಗಳು?: ಪ್ರಮುಖವಾಗಿ ಚೆಕ್‌ ಅಮಾನ್ಯಗೊಂಡ ಪ್ರಕರಣ, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳು, ಬ್ಯಾಂಕ್ ವಸೂಲಾತಿ, ಉದ್ಯೋಗ ಕಾರ್ಮಿಕರಿಗೆ ಸಂಬಂಧಿಸಿದ, ರಾಜಿಯಾಗಬಲ್ಲ ಅಪರಾಧಿಕ, ಆಸ್ತಿ ಭಾಗ, ವೈವಾಹಿಕ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡುವ ಮೊದಲೇ ಪರಸ್ಪರ ರಾಜಿ-ಸಂಧಾನದ ಮೂಲಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ನ್ಯಾಯಾಲಯದಲ್ಲಿ ಬಾಕಿ ಇರುವ, ರಾಜಿಯಾಗಬಲ್ಲ ಅಪರಾಧಿಕ ಮತ್ತು ಸಿವಿಲ್, ಅಪಘಾತ, ವಿಮೆ, ಪರಿಹಾರ ಪ್ರಕರಣಗಳು, ಭೂಸ್ವಾಧೀನ, ವೇತನ, ಭತ್ಯೆ, ಪಿಂಚಣಿ, ಬಾಡಿಗೆ ಅನುಭೋಗದ ಹಕ್ಕುಗಳಂತಹ ಸಿವಿಲ್ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.