
ಬೆಂಗಳೂರು: ಬೆಂಗಳೂರು ನಗರವು ಅತಿ ಕೆಟ್ಟ ಸಂಚಾರ ನಿರ್ವಹಣೆ ಹೊಂದಿದ್ದು, ಇಲ್ಲಿನ ಟ್ರಾಫಿಕ್ ‘ಅತ್ಯಂತ ಕುಖ್ಯಾತ’ವಾಗಿದೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಅವರು ಭಾನುವಾರ ಹೇಳಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿದ್ದ ರಾಜೀವ್ ರೈ ಅವರು ‘ನಗರದ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಗಿಂತ ಹೆಚ್ಚಿನ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೆ, ಇದರಿಂದಾಗಿ ನನ್ನ ವಿಮಾನ ತಪ್ಪುತಿತ್ತು’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.
‘ಬೆಂಗಳೂರಿನಲ್ಲಿ ಅತಿ ಕೆಟ್ಟ ಸಂಚಾರ ನಿರ್ವಹಣೆಯಿದೆ. ಸಂಚಾರ ಪೊಲೀಸರು ಕೂಡ ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕರಾಗಿದ್ದಾರೆ. ಅವರು ಪೋನ್ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ. ಇವರಿಂದಾಗಿ ಬೆಂಗಳೂರಿನಂತಹ ಸುಂದರ ನಗರದ ಹೆಸರು ಹಾಳಾಗುತ್ತಿದೆ’ ಎಂದು ಹೇಳಿದ್ದಾರೆ.
ರಾಜೀವ್ ರೈ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾನು ದೆಹಲಿಯಲ್ಲಿ ಆ ಸಂಸದರನ್ನು ಭೇಟಿಯಾಗುತ್ತೇನೆ. ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಟ್ರಾಫಿಕ್ ನಿರ್ವಹಣೆಯನ್ನು ಅವರಿಗೆ ತೋರಿಸುತ್ತೇನೆ. ನಂತರ ಅವರನ್ನು ಕೂಡ ಟ್ಯಾಗ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜೀವ್ ರೈ ಅವರ ಹೇಳಿಕೆಯ ನಂತರ, ನಗರದ ರಸ್ತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗಳು ಶುರುವಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆ ಸಮಸ್ಯೆ ಹಾಗೂ ಟ್ರಾಫಿಕ್ ಕುರಿತು ಹಲವು ಉದ್ಯಮಿಗಳು ಧ್ವನಿ ಎತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.