ADVERTISEMENT

‘ಕೆಐಎ’ನಲ್ಲಿ ಸಿಕ್ಕಿಬಿದ್ದ ಬಾಂಗ್ಲಾದೇಶದ ಪ್ರಜೆ; ದೇಶದಲ್ಲಿ 17 ವರ್ಷ ಅಕ್ರಮ ವಾಸ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:46 IST
Last Updated 4 ಆಗಸ್ಟ್ 2022, 20:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದಲ್ಲಿ 17 ವರ್ಷ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ಅಪುರ್ಬ್ ರಾಯ್ (27) ಹಾಗೂ ಅವರ ಪತ್ನಿ ತುಲಿ ದಾಸ್ (20) ಎಂಬುವರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಪೊಲೀಸರುಬಂಧಿಸಿದ್ದಾರೆ.

‘ಬಾಂಗ್ಲಾದೇಶ ಢಾಕಾದ ಖಸೂಲ್ ಬಿಕ್ರಮಪುರ್‌ದ ನಿವಾಸಿ ಅಪುರ್ಬ್‌ ರಾಯ್, 2005ರಲ್ಲಿ ಪರಿಚಯಸ್ಥರ ಜೊತೆ ಗಡಿ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿದ್ದ. ಪಶ್ಚಿಮ ಬಂಗಾಳ, ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಇತ್ತೀಚೆಗೆ ಜುಲೈ 28ರಂದು ಅಬುದಾಬಿಗೆ ಹೋಗಲೆಂದು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ, ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘10ನೇ ವಯಸ್ಸಿನಲ್ಲೇ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿದ್ದ ಅಪುರ್ಬ್‌, ಮದ್ಯವರ್ತಿಗಳ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದ. ಅದರ ಮೂಲಕವೇ ಪಾಸ್‌ಪೋರ್ಟ್ ಸಹ ಪಡೆದು, ಆಗಾಗ ತನ್ನ ದೇಶಕ್ಕೆ ಹೋಗಿ ಬರುತ್ತಿದ್ದ. ಈತ ವಾಸವಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿವೆ.

ADVERTISEMENT

ಬಾಂಗ್ಲಾ ಯುವತಿ ಮದುವೆ: ‘ಬಾಂಗ್ಲಾದೇಶದ ಯುವತಿ ತುಲಿ ಸಹಾ ಅವರನ್ನು ಮದುವೆಯಾಗಿದ್ದ ಅಪುರ್ಬ್‌, ಆಕೆಯನ್ನೂ ಅಕ್ರಮವಾಗಿ ಭಾರತಕ್ಕೆ ಕರೆಸಿಕೊಂಡಿದ್ದ. ನಕಲಿ ದಾಖಲೆ ಸೃಷ್ಟಿಸಿ ಪತ್ನಿಗೂ ಪಾಸ್‌ಪೋರ್ಟ್ ಮಾಡಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ, ದುಬೈ ಹಾಗೂ ಇತರೆ ದೇಶಗಳ ಮೂಲಕ ಬಾಂಗ್ಲಾದೇಶಕ್ಕೆ ಹೋಗಿ ಬರುತ್ತಿದ್ದರು. ಜುಲೈ 28ರಂದು ಅಬುದಾಬಿಗೆ ಹೋಗಲೆಂದು ದಂಪತಿ ನಿಲ್ದಾಣಕ್ಕೆ ಬಂದಿದ್ದರು. ನಿರ್ಗಮನ ದ್ವಾರದಲ್ಲಿ ದಂಪತಿಯನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ದಂಪತಿ, ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಿದ್ದರು. ಅವರಿಬ್ಬರ ಬಗ್ಗೆ ಅನುಮಾನಗೊಂಡು ಹೆಚ್ಚಿನ ಪರಿಶೀಲನೆ ನಡೆಸಲಾಯಿತು. ತಾವು ಬಾಂಗ್ಲಾದೇಶದ ಪ್ರಜೆಗಳೆಂಬುದನ್ನು ಒಪ್ಪಿಕೊಂಡರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.