ಬೂದು ತೋಳ
ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಿತ ತೋಳ ಧಾಮದಲ್ಲಿ ಅಳಿವಿನಂಚಿನಲ್ಲಿರುವ ಬೂದು ತೋಳ (ಇಂಡಿಯನ್ ಗ್ರೇ ಉಲ್ಫ್)ದ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟರ್ ಬಂಕಾಪೂರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದ್ದು, ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿ ಹೆಚ್ಚಳವಾಗುವುದಕ್ಕೂ ಇದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಕುರುಚಲು ಕಾಡಿನಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿತ್ತು, ಈಗ ಮತ್ತೊಂದು ತೋಳ ಐದು ಮರಿಗೆ ಜನ್ಮಕೊಟ್ಟಿದೆ. ನೈಸರ್ಗಿಕ ಗುಹೆಗಳು, ಬೆಟ್ಟ ಗುಡ್ಡಗಳನ್ನೂ ಹೊಂದಿರುವ ಈ ಧಾಮದಲ್ಲಿ, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿ ಮೊದಲಾದ ಹಲವು ವನ್ಯಜೀವಿಗಳಿವೆ. ಕಳ್ಳಬೇಟೆ ತಡೆಗೂ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ಈ ಕಾಡಿನಲ್ಲಿ ಬೂದು ತೋಳಗಳ ಸಂಖ್ಯೆ 40-45 ಕ್ಕೆ ಹೆಚ್ಚಳವಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಗುಹೆಗಳ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.