ADVERTISEMENT

ಸರ್ವಧರ್ಮ ಸಮಭಾವಕ್ಕೆ ಧಕ್ಕೆ ತರುವ ಕೆಲಸ: ಪ್ರೊ. ಬರಗೂರು ಕಳವಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 8:23 IST
Last Updated 31 ಮಾರ್ಚ್ 2019, 8:23 IST
ಸಂವಿಧಾನ ಸೈದ್ಧಾಂತಿಕ ಸಮಾವೇಶದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿದರು.
ಸಂವಿಧಾನ ಸೈದ್ಧಾಂತಿಕ ಸಮಾವೇಶದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿದರು.   

ತುಮಕೂರು: ಸಂವಿಧಾನದ ಆಶಯವಾದ ಸರ್ವಧರ್ಮ ಸಮ ಭಾವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಆಯೋಜಿಸಿದ ಸೈದ್ಧಾಂತಿ ಸಂವಿಧಾನ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಪ್ರಸ್ತಾವನೆಯಲ್ಲಿ ಸಮಾಜ ವಾದವಿದ್ದರೂ ಸಮಾಜದಲ್ಲಿ ಅದು ಕಾಣುತ್ತಿಲ್ಲ. ಜಾತ್ಯತೀತ ಎಂಬ ಪದ ಕೇಳಿದರೆ ಬೆಚ್ಚಿ ಬೀಳುವ ಜನರಿದ್ದಾರೆ. ಅಂಥವರು ಬೇರಾರೂ ಅಲ್ಲ. ಜಾತಿವಾದಿಗಳೇ ಆಗಿದ್ದಾರೆ. ಸದಾ ಶ್ರೀರಾಮನನ್ನು ಆರಾಧಿಸುತ್ತಿದ್ದ ಗಾಂಧೀಜಿ ಅವರು ರಾಷ್ಟ್ರೀಯ ಹೋರಾಟಕ್ಕೆ ಧರ್ಮ, ರಾಮನನ್ನು ಅಸ್ತ್ರವಾಗಿ ಬಳಸಿಕೊಳ್ಳಲಿಲ್ಲ. ಹಿಡಿ ಉಪ್ಪು, ಸತ್ಯ, ಚರಕಗಳನ್ನು ಅಸ್ತ್ರವಾಗಿಸಿಕೊಂಡಿದ್ದರು. ಧಾರ್ಮಿಕತೆ ದೇಶದ ಒಂದು ಬಾಗ. ಧಾರ್ಮಿಕತೆಯೇ ರಾಷ್ಟ್ರೀಯತೆ ಅಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

ಇವರೇ ಪ್ರಧಾನಿ ಅವರೇ ಮುಖ್ಯಮಂತ್ರಿ ಘೋಷಣೆ ಸಂವಿಧಾನ ವಿರೋಧಿ: ಚುನಾವಣೆ ಸಂದರ್ಭದಲ್ಲಿ ನಮ್ಮ ಮುಂದಿನ ಪ್ರಧಾನಿ ಇಂಥವರೇ. ಮುಂದಿನ ಮುಖ್ಯಮಂತ್ರಿ ಇವರೇ ಎಂದು ರಾಜಕೀಯ ಪಕ್ಷಗಳು ಘೋಷಣೆ ಮಾಡುವುದು ಸಂವಿಧಾನ, ಪ್ರಜಾಪ್ರಭುತ್ವ ಆಶಯಕ್ಕೆ ವಿರೋಧಿಯಾದುದು. ಮೊದಲೇ ನಿರ್ದಿಷ್ಟ ವ್ಯಕ್ತಿಯನ್ನು ಘೋಷಣೆ ಮಾಡುವುದಾದರೆ ಚುನಾವಣೆಗೆ ಅರ್ಥವಿಲ್ಲ. ಹಾಗಾದರೆ ನಾವೇಕೆ ಸಂಸದರನ್ನು, ಶಾಸಕರನ್ನು ಆಯ್ಕೆ ಮಾಡಬೇಕು ಎಂದು ಪ್ರಶ್ನಿಸಿದರು.

ಭಾರತದ ಭಾವಕೋಶವನ್ನು ಉದ್ರೇಕಿಸುವ ಮೂಲಕ ಸಹೋದರತೆ, ಮಾನವೀಯತೆ, ಮನುಷ್ಯತ್ವ ಸಂಬಂಧಗಳನ್ನು ನಾಶ ಮಾಡುವ ಪ್ರಯತ್ನ ನಡೆದಿದೆ.

ಪ್ರಜಾಪ್ರಭುತ್ವ ಎಂಬುದು ಪಂಚೇಂದ್ರೀಯ ವಂಚಿತವಾಗುತ್ತಿದೆ. ಕಿವಿ ಕಿವುಡಾಗಿದೆ, ಪ್ರಜೆಗಳ ನಾಲಿಗೆ ಮೌನವಾಗಿದೆ, ಇಂದ್ರೀಯಗಳು ಸಂವೇದನಾಶೀಲತೆ ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಚ್ಛ ಭಾರತ ಯೋಜಮೆಯಡಿ ನಾಲಿಗೆ ಸ್ವಚ್ಛಗೊಳಿಸಿ: ಬಂದೂಕು ಭಯೋತ್ಪಾದಕರಿಗಿಂತ ಭಾಷೆಯ ಭಯೋತ್ಪಾದಕರು ದೇಶಕ್ಕೆ ಅಪಾಯಕಾರಿಯಾಗಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ.ಸಾಹಿತಿಗಳು ಗಂಜಿಗಿರಾಕಿ, ಬಿಕನಾಶಿ ಎಂದು ಕರೆಯುತ್ತಾರೆ. ತಮಗೆ ಅನ್ವಯಿಸಬೇಕಾದ ಪದಗಳನ್ಮು ಸಾಹಿತಿ, ಲೇಖಕರಿಗೆ ಕರೆಯುತ್ತಿದ್ದಾರೆ. ಇಂತಹ ಅಪಾಯಕಾರಿ ಧೋರಣೆಯುಳ್ಳವರ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಹೇಳಿದರು.

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಸಮಾಜದ ಶಾಂತಿಗೆ ಪೂರಕವಲ್ಲದ ವಿಚಾರಗಳನ್ನು ಮಾತನಾಡಿ ನಾಲಿಗೆ ಹರಿಬಿಡುವವರ ನಾಲಿಗೆಯನ್ನು ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛಗೊಳಿಸಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ.ಎಂ.ಶ್ರೀನಿವಾಸಯ್ತ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವುದು ಮುರ್ಖತನ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.