ADVERTISEMENT

ಆರೋಪಿ ಮೌಲ್ವಿ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಟ್ಟಿರುವುದು ಏಕೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 5:19 IST
Last Updated 8 ಡಿಸೆಂಬರ್ 2023, 5:19 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ಜಮಾತ್ ಎ ಅಹಲೆ ಸುನ್ನತ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಮೌಲ್ವಿ ತನ್ವೀರ್ ಹಾಶ್ಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಚಾರ್ಜ್‌‌ಶೀಟ್‌ನಿಂದ ಅವರ ಹೆಸರನ್ನು ಕೈಬಿಟ್ಟಿರುವುದು ಏಕೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.

ಈ ಸಂಬಂಧ 'ಎಕ್ಸ್' ನಲ್ಲಿ ಎಫ್ಐಆರ್ ಪ್ರತಿಯನ್ನು ಹಂಚಿಕೊಂಡಿರುವ ಶಾಸಕ ಯತ್ನಾಳ, 2023 ಮೇ 6 ರಂದು ವಿಜಯಪುರದಲ್ಲಿ ನಡೆದಿದ್ದ ರೌಡಿ ಶೀಟರ್ ಹೈದರ್ ನದಾಫ್ ಕೊಲೆ ಪ್ರಕರಣದಲ್ಲಿ ಮೌಲ್ವಿ ಆರೋಪಿಯಾಗಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಆದರೆ, ಈಗ ಚಾರ್ಜ್‌‌ಶೀಟ್‌ನಲ್ಲಿ ಮೌಲ್ವಿಯ ಹೆಸರನ್ನು ಕೈಬಿಡಲಾಗಿದೆ. ಇದು ಯಾರ ಒತ್ತಡದ ಮೇರೆಗೆ ಕೈಬಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಕೊಲೆಯಾದ ರೌಡಿಶೀಟರ್‌ನ ಪತ್ನಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದು, ತನ್ನ ಪತಿಯ ಕೊಲೆಗೆ ಸಂಬಂಧಿಸಿದ ಸಾಕ್ಷಿಯನ್ನು ಮೌಲ್ವಿ ನಾಶ ಮಾಡುವ ಸಾಧ್ಯತೆ ಇದೆ. ಅಲ್ಲದೇ, ಮೌಲ್ವಿಯು ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರವನ್ನು ಶಾಸಕ ಯತ್ನಾಳ ಅವರು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಹಾಕಿದ್ದಾರೆ.

ಕೊಲೆ ಕೇಸಿನಲ್ಲಿ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿಯಿಂದ (ಚಾರ್ಜ್‌‌ಶೀಟ್‌) ಮೌಲ್ವಿಯ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜ್ ಸೀಟ್‌ನಿಂದ ತೆಗೆಸಲಾಯಿತು ಎಂಬುದಕ್ಕೆ ಸರ್ಕಾರ ಸ್ಪಷ್ಟಣೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮದ ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಸಿಎಂಗೆ ಏನಿತ್ತು? ಎಂದು ಪ್ರಶ್ನಿಸಿದ್ದಾರೆ. ಮೌಲ್ವಿಯ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರಧಲ್ಲಿ ಹಂಚಿಕೊಳ್ಳಲಿದ್ದೇನೆ. ಈತ ದೇಶದಿಂದ ಪೇರಿಕೀಳುವ ಸಾಧ್ಯತೆಗಳಿದ್ದು, ಪೊಲೀಸರು ಹಾಗೂ ಗುಪ್ತಚರ ಇಲಾಖೆ ಮೌಲ್ವಿಯ ಮೇಲೆ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ವ್ಯವಹಾರ ಸಂಬಂಧ ಇಲ್ಲ:

'ಯತ್ನಾಳ, ಮೌಲ್ವಿ ಕುಟುಂಬ ಉದ್ಯಮದ ಪಾಲುದಾರರು' ಎಂಬ ಆರೋಪದ ಕುರಿತು 'ಪ್ರಜಾವಾಣಿ' ಗೆ ಗುರುವಾರ ಬೆಳಿಗ್ಗೆ ಬೆಳಗಾವಿಯಿಂದ ಫೋನ್ ಕರೆ ಮಾಡಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, 'ವಿಜಯಪುರ ನಗರದಲ್ಲಿ 1971ರಲ್ಲಿ ಟೂರಿಸ್ಟ್ ಹೋಟೆಲ್ ಅನ್ನು ನಮ್ಮ ತಂದೆ ಸೇರಿದಂತೆ ನಾಲ್ಕೈದು ಜನರು ಲೀಜ್ ಆಧಾರದಲ್ಲಿ ಆರಂಭಿಸಿರುವುದು ನಿಜ. ಆದರೆ, ಇದರಲ್ಲಿ ಮೌಲ್ವಿ ಪಾಲುದಾರಿಕೆ ಇಲ್ಲ, ಅವರ ದೂರದ ಸಂಬಂಧಿಯೊಬ್ಬರು ಇದ್ದಾರೆ. ಮೌಲ್ವಿಯೊಂದಿಗೆ ನನ್ನ ಯಾವುದೇ ವ್ಯವಹಾರಿಕ ಪಾಲುದಾರಿಕೆ ಇಲ್ಲ' ಎಂದು ಸ್ಪಷ್ಟ ಪಡಿಸಿದರು.

'ವಿಜಯಪುರ ನಗರದಲ್ಲಿ ಮೌಲ್ವಿ ಮನೆ, ನನ್ನ ಮನೆ ಅಕ್ಕಪಕ್ಕದಲ್ಲಿ ಇದೆ ಎಂದಾಕ್ಷಣ ಆತನ ಎಲ್ಲ ಚಟುವಟಿಕೆಗಳನ್ನು ನಾನು ಗಮನಿಸಬೇಕೆಂದೇನು ಇಲ್ಲ, ಆತನೊಂದಿಗೆ ಯಾವುದೇ ಸ್ನೇಹ, ವ್ಯವಹಾರ ಇಟ್ಟುಕೊಂಡಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.