ADVERTISEMENT

ಯತ್ನಾಳ ಉಚ್ಚಾಟನೆ | ಬೆಂಗಳೂರಿನಲ್ಲಿ ನಾಳೆ ಭಿನ್ನಮತೀಯರ ಸಭೆ: ರಮೇಶ ಜಾರಕಿಹೊಳಿ

ಯತ್ನಾಳ ಒಂಟಿಯಲ್ಲ; ನಾವೆಲ್ಲ ಜತೆಗಿದ್ದೇವೆ, ಉಚ್ಚಾಟನೆ ಮರು ಪರಿಶೀಲನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 18:00 IST
Last Updated 27 ಮಾರ್ಚ್ 2025, 18:00 IST
<div class="paragraphs"><p>ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ&nbsp;ರಮೇಶ ಜಾರಕಿಹೊಳಿ</p></div>

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ

   

ಬೆಳಗಾವಿ: ‘ಬಸನಗೌಡ ಪಾಟೀಲ ಯತ್ನಾಳ ವಿರುದ್ಧದ ಕ್ರಮ ನಿರೀಕ್ಷಿತವಾಗಿತ್ತು. ಆದರೆ, ಅವರ ಉಚ್ಚಾಟನೆ ವಿಷಯ ಮರು ಪರಿಶೀಲನೆಗೆ ಕೋರಿ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆಯುತ್ತೇವೆ. ಈ ಸಂಬಂಧ ಎಲ್ಲ ‌ಭಿನ್ನಮತೀಯರು ಬೆಂಗಳೂರಿನಲ್ಲಿ ಶುಕ್ರವಾರ (ಮಾರ್ಚ್ 28) ಸಭೆ ಸೇರುತ್ತೇವೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಗುರುವಾರ ಹೇಳಿದರು.

‘ಯತ್ನಾಳ ಒಂಟಿ ಅಲ್ಲ. ಅವರೊಂದಿಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ. ಅವರು ಬಿಜೆಪಿಗೆ ವಾಪಸ್ ಆಗುವರು ಎಂಬ ವಿಶ್ವಾಸವಿದೆ. ಏನೇ ಆದರೂ, ಯತ್ನಾಳ ಮತ್ತು ನಮ್ಮ‌ ತಂಡದವರು ಬಿಜೆಪಿಯಲ್ಲೇ ಇರುತ್ತೇವೆ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಪ್ರಯತ್ನಿಸುತ್ತೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ನಮ್ಮ ಪಕ್ಷದ ದೊಡ್ಡ ನಾಯಕ ಯತ್ನಾಳ ದೊಡ್ಡ ಸಮುದಾಯದವರು. ಅವರನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳಬೇಕಿತ್ತು. ಹಾಗೆಂದು ಪಕ್ಷದ‌ ನಿರ್ಣಯ ಪ್ರಶ್ನಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ’ ಎಂದರು.

‘ಪಕ್ಷದ ನಾಯಕರ ‌ವಿರುದ್ಧ ನಾನೂ ಮಾತನಾಡಿದ್ದೇನೆ. ಸೋಮಶೇಖರ ಅವರಿಗೂ ನೋಟಿಸ್ ಜಾರಿಯಾಗಿದೆ. ಆದರೆ, ಯತ್ನಾಳ ಅವರ ಮೇಲೆ ಪಕ್ಷಕ್ಕೆ ಹೆಚ್ಚು ಪ್ರೀತಿ ಇದೆ.‌ ಅದೇ ಕಾರಣಕ್ಕೆ ಅವರ ಉಚ್ಚಾಟನೆಯಾಗಿದೆ’ ಎಂದರು.

‘ಕೇಂದ್ರದ ಪ್ರಮುಖ ನಾಯಕರೊಂದಿಗೆ ಮಾತನಾಡಿ, ಬಿಜೆಪಿಯು ತಂದೆ-ತಾಯಿ ಸಮಾನ ಎಂದು ತಿಳಿಸಿ
ದ್ದೇನೆ. ಬಿ.ವೈ.ವಿಜಯೇಂದ್ರ ಕುರಿತು ನಾನು ಏನನ್ನೂ ಹೇಳುವುದಿಲ್ಲ. ಆದರೆ, ಈ ಹಿಂದೆ ಅವರ ಬಗ್ಗೆ‌ ಆಡಿದ ಎಲ್ಲ ಮಾತಿಗೆ ನಾನು ಬದ್ಧನಿದ್ದೇನೆ’ ಎಂದರು.

‘ಉಚ್ಚಾಟನೆ: ಹಿಂಪಡೆಯಲು ಏ.10 ಗಡವು’
‘ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಆದೇಶವನ್ನು ಏಪ್ರಿಲ್‌ 10ರೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ, ಏಪ್ರಿಲ್‌ 13ರಿಂದ ಸಮಾಜದಿಂದ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.‘ಯಡಿಯೂರಪ್ಪ, ವಿಜಯೇಂದ್ರ ಕುತಂತ್ರದಿಂದ ಯತ್ನಾಳ ಉಚ್ಚಾಟನೆಯಾಗಿದೆ. ಲಿಂಗಾಯತರನ್ನು ಕಡೆಗಣಿಸಿ ರಾಜ್ಯದಲ್ಲಿ ಸರ್ಕಾರಗಳು ಉಳಿದಿಲ್ಲ. ದೊಡ್ಡ ಬಲ ಹೊಂದಿದ ‍ಪಂಚಮಸಾಲಿ ನಾಯಕರನ್ನು ತುಳಿದವರು ಉದ್ಧಾರವಾಗಿಲ್ಲ. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ಜೆ.ಎಚ್‌.ಪಟೇಲ್ ಅವರ ಕಾಲದಿಂದ ಇದಕ್ಕೆ ಉದಾಹರಣೆಗಳಿವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿ, ಪಂಚಮಸಾಲಿ ಸಮಾಜದ ಮೀಸಲಾತಿ, ಹಿಂದೂ ಪರ ನಿಲುವಿಗೆ ಯತ್ನಾಳ ಅವರು ಯಾವಾಗಲೂ ಮುಂದಿದ್ದಾರೆ. ಎಲ್ಲ ಜಾತಿ, ಸಮಾಜದವರೊಂದಿಗೂ ನಿಂತಿದ್ದಾರೆ. ಈಗ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲುವರು’ ಎಂದರು.

‘ಯತ್ನಾಳ ಅವರ ಬಗ್ಗೆ ಪಂಚಮಸಾಲಿ ಸಮಾಜದ ಎಲ್ಲ ಶಾಸಕರು, ಸಂಸದರು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದವರೂ ಅವರ ಪರ ನಿಲ್ಲಬೇಕು’ ಎಂದರು.

ಯತ್ನಾಳ ಅವರ ಉಚ್ಚಾಟನೆ ಯಿಂದ ಬಿಜೆಪಿಗೆ ನಷ್ಟ . ನಿರ್ಣಯವನ್ನು ಮರುಪರಿಶೀಲಿಸಲು ವರಿಷ್ಠರೊಂದಿಗೆ ಚರ್ಚಿಸುವೆ ಹೊರತು ಉಚ್ಚಾಟನೆ ಕುರಿತು ಪ್ರಶ್ನಿಸುವುದಿಲ್ಲ
ಬಿ.ಶ್ರೀರಾಮುಲು, ಮಾಜಿ ಸಚಿವ
ಪಕ್ಷ ಹಲವು ಕಾರಣಕ್ಕೆ ಅನಿವಾರ್ಯ ತೀರ್ಮಾನಕ್ಕೆ ಬಂದಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಈ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ
ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ
ಯತ್ನಾಳ್ ಸದನದಲ್ಲಿ ಮಧುಬಲೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಉಚ್ಚಾಟಿಸಲಾಗಿದೆ. ಅವರು ಪಕ್ಷದ ಶಿಸ್ತು ಪಾಲಿಸುತ್ತಿರಲಿಲ್ಲ. ಸದನದಲ್ಲೂ ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಇದು ನಮ್ಮಂತಹ ಕಿರಿಯ ಶಾಸಕರಿಗೆ ಪಾಠ
ಕೆ. ಹರೀಶ್‌ ಗೌಡ, ಕಾಂಗ್ರೆಸ್‌ ಶಾಸಕ
ಯತ್ನಾಳ ಅವರ ಉಚ್ಚಾಟನೆ ಪಕ್ಷದ ನಿರ್ಣಯ. ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ಎರಡು ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ
ಶಿವರಾಮ ಹೆಬ್ಬಾರ, ಶಾಸಕ
ಯತ್ನಾಳ ಒಂದು ವರ್ಷದಿಂದ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ತಿದ್ದಿಕೊಳ್ಳಲು ಹಲವು ಅವಕಾಶ ನೀಡಿದರೂ ಸುಧಾರಿಸಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು
ಮುರುಗೇಶ ನಿರಾಣಿ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.