
ಸುವರ್ಣ ವಿಧಾನಸೌಧ(ಬೆಳಗಾವಿ): ಆರ್ಥಿಕವಾಗಿ ದುರ್ಬಲರಾದವರಿಗೆ ಕೇಂದ್ರ ಸರ್ಕಾರ ತಂದ ಮೀಸಲಾತಿಯ ಕುರಿತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯತ್ನಾಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಆಗ ಸಂವಿಧಾನದ ಪ್ರತಿಯನ್ನು ತರಿಸಿದ ಸಿದ್ದರಾಮಯ್ಯ ಅವರು ಆ ರೀತಿಯ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪಾಠ ಮಾಡಿದರು.
‘ಮೋದಿ ಸರ್ಕಾರ ಆರ್ಥಿಕವಾಗಿ ದುರ್ಬಲರಾದವರಿಗೆ (ಇಡಬ್ಲ್ಯೂಎಸ್) ಮೀಸಲಾತಿ ನೀಡಿರುವ ಬಗ್ಗೆ ಸಿದ್ದರಾಮಯ್ಯ ಪೂರ್ವಗ್ರಹ ಹೊಂದಿದ್ದಾರೆ’ ಎಂದು ಯತ್ನಾಳ ಹೇಳಿದರು. ‘ನಿಮಗೆ ಸಂವಿಧಾನ ಗೊತ್ತಿದೆಯಾ? ಸಂವಿಧಾನದ ಸೆಕ್ಷನ್ 15 ಮತ್ತು 16 ಓದಿದ್ದೀರಾ’ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದೂ ಅಲ್ಲದೇ, ‘ಸಂವಿಧಾನದ ಪ್ರತಿ ತಾರಮ್ಮ’ ಎಂದು ವಿಧಾನಸಭಾ ಕಾರ್ಯದರ್ಶಿಗೆ ಸೂಚಿಸಿದರು.
ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಸಂವಿಧಾನದ ಪ್ರತಿ ತಂದು ಕೊಟ್ಟರು. ಅದರ ಪುಟಗಳನ್ನು ತಿರುವಿ, ಕೆಲವು ಸಾಲುಗಳನ್ನು ಓದಿದರು. ಏನೋ ತಪ್ಪುತ್ತಿದೆ ಎಂದು ಭಾವಿಸಿ ಮತ್ತೆ ಪುಟಗಳನ್ನು ತಿರುವಿದರು, ತಡವರಿಸಿದರು. ಮತ್ತೊಂದು ಪ್ರತಿ ತರಿಸಿ ಕಲಂ ಅನ್ನು ಓದಿದರು.
ಮುಖ್ಯಮಂತ್ರಿ ತಡವರಿಸಿದ್ದನ್ನು ಕಂಡ ಯತ್ನಾಳ, ‘ಮುಖ್ಯಮಂತ್ರಿಯವರಿಗೇ ಗೊಂದಲ ಆಗಿದೆ. ಸಂವಿಧಾನದ ಬಗ್ಗೆಯೇ ಗೊತ್ತಿಲ್ಲ. ಇಡಬ್ಲ್ಯೂಎಸ್ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು ಕೂಡ ಸಂವಿಧಾನದಿಂದಲೇ. ಸಂವಿಧಾನದಲ್ಲಿ ಅವಕಾಶ ಇಲ್ಲದೇ ಇದ್ದರೂ ಮುಸ್ಲಿಮರಿಗೆ ಹೇಗೆ ಮೀಸಲಾತಿ ನೀಡಿದ್ದೀರಿ’ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸಂವಿಧಾನದ 15(4)ನೇ ವಿಧಿ ಪ್ರಕಾರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಕೊಡಬೇಕು ಎಂದು ಇದೆ. ಆದರೆ, ಮೋದಿ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು, ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.