ADVERTISEMENT

ಬಿಜೆಪಿಗೆ ಬಿಸಿತುಪ್ಪವಾದ ಶಾಸಕ ಬಸನಗೌಡ!

ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಯತ್ನಾಳ ಕಟು ಟೀಕೆ

ಡಿ.ಬಿ, ನಾಗರಾಜ
Published 22 ಫೆಬ್ರುವರಿ 2019, 19:44 IST
Last Updated 22 ಫೆಬ್ರುವರಿ 2019, 19:44 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ರಾಜ್ಯದಲ್ಲಿ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ ಆರಂಭಗೊಂಡ ಬೆನ್ನಲ್ಲೇ, ವಿಜಯಪುರ ಜಿಲ್ಲಾ ಬಿಜೆಪಿ ಘಟಕದೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ.

ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂದೇ ಬಿಂಬಿತಗೊಂಡಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರುದ್ಧ, ಅವರದೇ ‍ಪಕ್ಷದವರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಕಿಡಿಕಾರಿದ್ದಾರೆ.

ಕೇಂದ್ರ ಸಚಿವರು ರಾಜ್ಯ ರಾಜಕಾರಣಕ್ಕೆ ಮರಳುವ ಆಶಯ ವ್ಯಕ್ತಪಡಿಸಿ ಹೇಳಿಕೆ ನೀಡಿದ ಮರುದಿನ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಯಾತ್ರೆ ವಿಜಯಪುರಕ್ಕೆ (ಫೆ.23) ಬರುವ ಮುನ್ನಾ ದಿನ ಯತ್ನಾಳ ಅವರು ಟೀಕಾ
ಪ್ರಹಾರ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಜಿಗಜಿಣಗಿ ಅವರ ಹೆಸರನ್ನು ಪ್ರಸ್ತಾಪಿಸದೇ ಟ್ವೀಟರ್‌ ಹಾಗೂ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ವಾಗ್ದಾಳಿ ಮಾಡಿರುವ ಯತ್ನಾಳ, ‘ಹತ್ತು ವರ್ಷ ಅವಧಿಯ ಸಂಸದರ ನಿಧಿ ಎಲ್ಲಿ ಮತ್ತು ಯಾವ ಹಳ್ಳಿಗಳಿಗೆ ಮುಟ್ಟಿತು ? ವಿನಾಶ ಕಾಲೇ ವಿಪರೀತ ಬುದ್ಧಿ’, ‘ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರ ಆದರ್ಶ ಗ್ರಾಮ ಮಖಣಾಪುರ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಹಳ್ಳಿ. ನಾಚಿಕೆಗೇಡು’, ‘ಹಿಂದಿನ ಯಾವ ಸಂಸದರು ಮಾಡದೇ ಇರುವಷ್ಟು ಅಭಿವೃದ್ಧಿ ನಾನು ಮಾಡಿದ್ದೇನೆ ಎಂದು ಹೇಳಲಿಕ್ಕೆ ನಾಚಿಕೆಯಾಗಬೇಕು’ ಎಂದು ಸರಣಿ ಸಂದೇಶಗಳನ್ನು ಹಾಕಿದ್ದಾರೆ. ಅವರ ಬೆಂಬಲಿಗರು ಕೂಡ ಇವುಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಶೇರ್‌ ಮಾಡುತ್ತಿದ್ದಾರೆ.

ಹಲ ದಿನಗಳಿಂದ ಯತ್ನಾಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ, ಜಿಗಜಿಣಗಿ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಇದೀಗ ಅವರೇ ನೇರವಾಗಿ ಅಖಾಡಕ್ಕಿಳಿದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈ ಬೆಳವಣಿಗೆ ಬಿಜೆಪಿ ಜಿಲ್ಲಾ ಘಟಕದಲ್ಲಿ ತಳಮಳ ಸೃಷ್ಟಿಸಿದೆ.

ಇದರೊಂದಿಗೆ ಬಸನಗೌಡ ಬೆಂಬಲಿಗರ ಪಡೆ ‘ಇದು ‘ಟ್ರೇಲರ್’ ಅಷ್ಟೆ. ಮುಂದಿನ ದಿನಗಳಲ್ಲಿ ಭಾರೀ ಪಿಕ್ಚರ್‌ ಇರಲಿದೆ. ಗೌಡ್ರೇ ಅಖಾಡಕ್ಕಿಳಿದಾಯ್ತು’ ಎಂದು ಸಂಭ್ರಮಿಸಿದರೆ; ಜಿಗಜಿಣಗಿ ಬೆಂಬಲಿಗರು ‘ವರಿಷ್ಠರಿಗೆ ಎಲ್ಲ ಮಾಹಿತಿಯಿದೆ. ಇದು ನಿರೀಕ್ಷಿತ. ಚುನಾವಣೆ ಸಮೀಪಿಸಿದಂತೆ ಗೊಂದಲ ಸೃಷ್ಟಿಸುವ ಯತ್ನಮತ್ತಷ್ಟು ಹೆಚ್ಚಾಗಲಿದೆ. ಆದರೆ, ಪಕ್ಷದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಚುನಾವಣೆಯ ಗೆಲುವಿನತ್ತ ಅಷ್ಟೇ ನಮ್ಮ ಚಿತ್ತವಿರಲಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಭಿನ್ನಾಭಿಪ್ರಾಯವಿಲ್ಲ: ರಮೇಶ ಜಿಗಜಿಣಗಿ
‘ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ಸಂದರ್ಭದಲ್ಲಿ ನನ್ನ ವಿರುದ್ಧ ಏಕೆ ಟೀಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರನ್ನೇ ವಿಚಾರಿಸಿ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರನ್ನು ರಾಜಕೀಯವಾಗಿ ಬೆಳೆಸಿದ್ದೇ ನಾನು. ಅವರ ಸಹೋದರ, 40 ವರ್ಷಗಳ ಹಿಂದೆ ಬಸನಗೌಡನನ್ನು‌ ನನ್ನ ಬಳಿ ಬಿಟ್ಟು ರಾಜಕೀಯವಾಗಿ ಬೆಳೆಸುವಂತೆ ಹೇಳಿದ್ದರು. ಅವರು ಈಗ ತೀರಿ ಹೋಗಿದ್ದಾರೆ’ ಎಂದು ಹೇಳಿದರು.

‘ನನಗೆ ಅವರ ಮೇಲೆ ಪ್ರೀತಿ ಇದೆ. ನನಗೆ ಅವರೇನೂ ಸವಾಲು ಹಾಕಿಲ್ಲ. ಹಾಗಾಗಿ ನಾನೂ ಸವಾಲು ಹಾಕುವುದಿಲ್ಲ. ನಾನು ಸಚಿವನಾಗಿದ್ದಾಗ ಕುಡಿಯುವ ನೀರಿನ ₹110 ಕೋಟಿ ಮೊತ್ತದ ಯೋಜನೆ ಮಂಜೂರು ಮಾಡಿಸಿದ್ದೆ. ಆಗ ನಾನು ಜೆಡಿಎಸ್‌ನಲ್ಲಿದ್ದೆ, ಅವರು ಬಿಜೆಪಿಯಲ್ಲಿದ್ದರು’ ಎಂದರು.

‘ಐದು ವರ್ಷ ನಾನೇನೂ ಮಾಡಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದ ಅವರು, ‘ಈ ಚುನಾವಣೆಯಲ್ಲೂ ನಾನೇ ಅಭ್ಯರ್ಥಿ. ಗೆಲುವು ಸಾಧಿಸುವುದು ಕೂಡ ನಾನೇ. ನನ್ನನ್ನು ಬಿಟ್ಟು ಅಲ್ಲಿ ಬೇರಾವ ಅಭ್ಯರ್ಥಿ ಇದ್ದಾರೆ?’ ಎಂದು ಕೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಜಿಗಜಿಣಗಿ, ‘ಸಿದ್ದರಾಮಯ್ಯನವರ ಅಪ್ಪನಾಣೆ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗುತ್ತಾರೆ’ ಎಂದರು.

**

ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಕ್ಷೇತ್ರದ ಜನರು, ಮತದಾರರೇ ಎಲ್ಲವನ್ನೂ ನಿರ್ಧರಿಸುತ್ತಾರೆ
- ರಮೇಶ ಜಿಗಜಿಣಗಿ, ಕೇಂದ್ರ ಸಚಿವ

**

ವಿನಾಕಾರಣ ವಾಗ್ದಾಳಿ ನಡೆಸುತ್ತಿದ್ದಾರೆ. ನಾನು ಇವರಿಗೆ ಅಂಜಲ್ಲ. ದಿಟ್ಟ ಪ್ರತಿಕ್ರಿಯೆ ನೀಡುವುದನ್ನು ಮುಂದುವರಿಸುವೆ
- ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.