ADVERTISEMENT

ಜರ್ಮನಿಯಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ಬಸವ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 2:21 IST
Last Updated 15 ಜೂನ್ 2025, 2:21 IST
<div class="paragraphs"><p>ಜರ್ಮನಿಯಲ್ಲಿ&nbsp;ಬಸವ ಜಯಂತಿ ಆಚರಣೆ</p></div>

ಜರ್ಮನಿಯಲ್ಲಿ ಬಸವ ಜಯಂತಿ ಆಚರಣೆ

   

ಲೋಕದ ಡೊಂಕ ನೀವೇಕೆ ತಿದ್ದುವಿರಿ,

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,

ADVERTISEMENT

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ

ನಮ್ಮ ಕೂಡಲಸಂಗಮದೇವ”

--ಬಸವಣ್ಣ

ಜರ್ಮನಿ ದೇಶದ ಎರ್‌ಲಾಂಗನಲ್ಲಿ ಬಸವ ಸಮಿತಿ ಯುರೋಪ್ ವತಿಯಿಂದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಹಾಗೂ ಬಸವಣ್ಣನವರ ಅನುಯಾಯಿಗಳ ಸಮ್ಮಿಲನಕ್ಕೂ ಸಾಕ್ಷಿಯಾಗಿತ್ತು.

ಯುರೋಪ್‌ನ ಹಲವು ದೇಶಗಳಿಂದ ಬಸವ ಭಕ್ತರು ಒಗ್ಗೂಡಿ ಎರಡು ವರ್ಷಗಳ ಸತತ ಪ್ರಯತ್ನದಿಂದ ಬಸವ ಸಮಿತಿ ಯುರೋಪ್ ಎಂಬ ಸಂಘವನ್ನು ಸ್ಥಾಪಿಸಲಾಗಿದೆ. ಯೂರೋಪಿನ ದೇಶಗಳಾದ ಜರ್ಮನಿ, ಬೆಲ್ಜಿಯಂ, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಫ್ರಾನ್ಸ್ ದೇಶದ ಭಕ್ತರು ಜೊತೆಗೂಡಿದ್ದಾರೆ. ಮ್ಯೂನಿಖ್, ಮ್ಯಾಗ್ಡೆಬರ್ಗ್, ಫ್ರಾಂಕ್‌ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಬೆಂಬಲ ನೀಡಿ, ಸಕ್ರಿಯವಾಗಿ ಭಾಗವಹಿಸಿವೆ. 150ಕ್ಕಿಂತ ಅಧಿಕ ಬಸವ ಭಕ್ತರು ಹಾಗೂ ಅವರ ಕುಟುಂಬದವರು ಬಂದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸಮಾರಂಭವನ್ನು ಬೇರೆ‑ಬೇರೆ ದೇಶಗಳ ನಗರಗಳಲ್ಲಿ ನಡೆಸುವ ಯೋಜನೆ ಇದೆ.

ನಾವು ಕೇವಲ ಭಾರತದ ಜಾತ್ರೆಗಳಲ್ಲಿ ತೇರುಗಳನ್ನ ನೋಡಿದ್ದೆವು. ಆದರೆ, ಮೊಟ್ಟ ಮೊದಲನೆಯ ಬಾರಿಗೆ ಜರ್ಮನಿಯಲ್ಲಿ ಬಸವಣ್ಣನವರ ತೇರು ಕಂಡು ಎಲ್ಲರಿಗು ಆಶ್ಚರ್ಯವಾಯಿತು. ಬಸವೇಶ್ವರವರ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡು ಪುಳಕಿತರಾದರು. ಆ ಮಧುರ ಕ್ಷಣವನ್ನು ಸವಿಯಲು ಭಕ್ತರೆಲ್ಲರೂ ಉತ್ಸುಕರಾಗಿದ್ದರು. ಮೆರವಣಿಗೆಯ ನೇತೃತ್ವವನ್ನು ವಹಿಸಿಕೊಂಡಂತಹ ವಿನಯಕುಮಾರ ಶೇಷಾದ್ರಿ ಶಾಸ್ತ್ರೂಪ್ತವಾಗಿ ಪೂಜೆ ಮಾಡಿ ಮತ್ತು ಶ್ರೀದೇವಿ ವಿನಯ ಶೇಷಾದ್ರಿ ಅವರು ಪ್ರಸಾದ ಹಂಚಿದರು. ನಟ್ರಾಸ್ ತಂಡ, ಲೆಜಿಮ್, ಕಂಸಾಳೆ ಮತ್ತು ಓಂ ಧೋಲ್ ತಾಶಾ ನೃತ್ಯ ತಂಡದ ಕುಣಿತ ಎಲ್ಲರ ಮನಸೆಳೆಯಿತು. ಶಿವಸ್ತೋತ್ರ ಪಠಿಸುವ ಮೂಲಕ ಅರವಿಂದ ರಮೇಶ ಗಮನ ಸೆಳೆದರು.

ಚಂದನ ಬಾಳೆ ಮತ್ತು ಮಕ್ಕಳ ತಂಡ (ಕುಂಶಿ ಬಾಳೆ, ಅನೀಶ ಬಾಳೆ, ಅಯಾಂಶ ಬಾಳೆ, ಅನನ್ಯ ಸಾಗರಮಠ, ಅನಿಕಾ ಸಾಗರಮಠ, ದಿತೌಜಸ ಯೋಗೀಶ್ ಕುಮಾರ ಮತ್ತು ವೇದಾಂತ ದೇವತಿ, ಮನ್ವಿತ್ ಬಡಿಗೇರ) ದವರಿಂದ ವಚನಗಾಯಣದೊಂದಿಗೆ, ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನ ಪ್ರಾರಂಭಿಸಿದರು. ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಶ್ರೀ ಅಭಿನವ ಕುಮಾರ (ಭಾರತೀಯ ರಾಯಭಾರಿ ಕಚೇರಿ, ಮ್ಯೂನಿಚ್, ಜರ್ಮನಿ) ಇವರು ನೆರವೇರಿಸಿದರು.

ಸ್ವತಹ ಬಿಹಾರಿ ಆಗಿದ್ದರು ಬಸವಣ್ಣನವರ ಕಾರ್ಯವ್ಯೆಖರಿ, ಜಾತಿ ನಿರ್ಮೂಲನೆ, ತಮ್ಮ ಕಾಲಮಾನಕ್ಕಿಂತ ಬಹಳ ಮುಂದಿನ ವಿಚಾರವಂತರಾಗಿದ್ದರು ಮತ್ತು ಅನುಭವ ಮಂಟಪದ ಬಗ್ಗೆ ತಿಳಿದು ಅರಿತು ಗುಣಗಾನ ಮಾಡಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ರಾಮಿ ಭೂಕಾಕೆಮ್ (ಅಧ್ಯಕ್ಷರು, ವಲಸೆ ಪ್ರಾಧಿಕಾರ, ಎರ್ಲಾಂಗಾನ) ಅವರು ಬಸವಣ್ಣನವರ ಬಗ್ಗೆ ಹೇಳುತ್ತಾ ನಾವು ಈ ದಿನಗಳಲ್ಲಿ ಎಲ್ಲರೂ ಒಂದೇ ಎಂದು ಹೇಳುತ್ತೆವೆ. ಆದರೆ, ಬಸವಣ್ಣನರು 12ನೇ ಶತಮಾನದಲ್ಲಿಯೇ ಈ ಒಗ್ಗಟಿನ ಮಂತ್ರವನ್ನು ಘೋಷಣೆ ಮಾಡಿ ಕಾರ್ಯರೂಪಕ್ಕೆ ತಂದವರು, ವಿವಿಧತೆಯಲ್ಲಿ ಏಕತೆ ಅಂತ ಬಸವಣ್ಣನವರ ಬಗ್ಗೆ ತಿಳಿದು ಮಾತನಾಡಿದ್ದು ಗಮನಾರ್ಹವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಶಾ ರಮೇಶ್ (SPD - ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ) ಅವರ ಭಾಷಣದಲ್ಲಿ ಚಿಕ್ಕವರಿದ್ದಾಗಿಂದಲೂ ಬಸವಣ್ಣವರಿಂದ ಪ್ರೇರಿತಗೊಂಡಿದ್ದನ್ನು ತಿಳಿಸಿದರು. ಕಾಯಕವೇ ಕೈಲಾಸವನ್ನು ಪ್ರತಿಪಾದಿಸಿ ಬೆಳೆದಿದ್ದೇನೆ. ಕರ್ಮಭೂಮಿ ಮತ್ತು ಜನ್ಮಭೂಮಿಯನ್ನ ಗೌರವಿಸುತ್ತೇನೆ. ಮನುಷ್ಯತ್ವವೇ ಮೊದಲು ಎಂದು ಬಸವಣ್ಣನವರ ಬಗ್ಗೆ ಕಿರುಮಾತನ್ನು ಮುಗಿಸಿದರು. ಆಶಾ ರಮೇಶ್ ಅವರು ತಮ್ಮ ರಾಜಕೀಯ ವೃತ್ತಿಯನ್ನು ಜರ್ಮನಿಯಲ್ಲಿ ಪ್ರಾರಂಭಿಸಿದ್ದು ಮುಂದಿನ ವರ್ಷ 2026ರಲ್ಲಿ ರಾಷ್ಟೀಯ ಪಕ್ಷವಾದ ಎಸ್‌ಪಿಡಿ ವತಿಯಿಂದ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು ಕನ್ನಡದವರು ಎಂಬುವುದೇ ನಮ್ಮ ಹಿರಿಮೆ.

ಈ ಸುಸಂಧರ್ಭದಲ್ಲಿ ವಿನ್‌ಶಿ ಫೌಂಡೇಶನ್ ವತಿಯಿಂದ ಶರಣ ವಿನಯ ಶಿರಹಟ್ಟಿಮಠ ಮತ್ತು ಶರಣೆ ಶಿಲ್ಪಾ ಶಿರಹಟ್ಟಿಮಠ ಬರೆದ ‘ಬಸವ ಭಾಷೆಯ ಚಲನಶೀಲತೆ’ ಎಂಬ ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜ ಸುಧಾರಣಾ ಇತಿಹಾಸದಲ್ಲಿ ಬಸವಣ್ಣವರ ವಚನಗಳು ಒಂದು ಮಹತ್ವಪೂರ್ಣ ತಿರುವು, ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಉಳಿಯದೆ ಜನಸಾಮಾನ್ಯರ ಬದುಕಿಗೆ ದಿಕ್ಸೂಚಿಯಾಗಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿ ಮತ್ತು ಮುಖ್ಯವಾಗಿಯೂ ಕನ್ನಡ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಾಧ್ಯಮವಾಗಿ ರೂಪುಗೊಂಡಿದೆ. ಬಸವಣ್ಣನವರು ವಚನಗಳಲ್ಲಿ ಬಳಸಿದ ಭಾಷೆ, ಸೃಜನಶೀಲತೆ, ಮತ್ತು ಚಲನಶೀಲತೆಯನ್ನು ಅಳವಡಿಸಿ ವಿಶೇಷ ವಿದ್ವತ್ಪೂರ್ಣ ಪ್ರಯತ್ನವಾಗಿದೆ ಈ ಪುಸ್ತಕ.

ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ ಮಾತನಾಡಿ, ‘ದೊಡ್ಡವರ ಆಶೀರ್ವಾದದಿಂದ ನಾವು ಹೊರದೇಶದಲ್ಲಿ ನೆಲೆ ಕಂಡುಕೊಂಡು ನಮ್ಮ ಮೂಲತತ್ವವಾದ ಬಸವತತ್ವವನ್ನು ಮರೆಯದೆ ಎತ್ತಿ ಹಿಡಿಯಲು ಮುಂದಾಗಬೇಕು. ಕೆಲಸಕ್ಕಾಗಿ ಬಂದು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾಚನವನ್ನು ಪಾಲಿಸುತ್ತಿದ್ದೇವೆ. ಗೊತ್ತಿದ್ದೋ ಗೊತ್ತಿಲ್ದೇನೂ ಬಸವಣ್ಣ ತೋರಿದ ದಾರಿ ನಮ್ಮ ಜೀವನದ ಭಾಗವಾಗಿವೆ. ಬಸವ ಸಮಿತಿ ಯುರೋಪ್ ಹುಟ್ಟಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಇದು ಏಕೆ ಬೇಕು ಅನ್ನೋದನ್ನ ಮನದಟ್ಟು ಮಾಡಿದರು. ಮುಂದೆ ಗುರಿ, ಹಿಂದೆ ಗುರು, ಪಕ್ಕದಲ್ಲಿ ಪ್ರೋತ್ಸಾಹಿಸುವ ಹೆಂಡತಿ ಇದ್ರೆ ಏನಾದರು ಸಾಧನೆ ಮಾಡಬಹುದು ಎಂದು ಹೇಳಿದ್ದಾರೆ.

ಬಸವಣ್ಣನವರು ಧಾಸೋಹಕ್ಕೆ ತಮ್ಮನ್ನು ತಾವು ಅರ್ಪಿಸುವ ಉತ್ಸಾಹದಲ್ಲಿ ಇರುವವರು -

ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ

ಎನ್ನ ತನುಮನಧನವಲಸದಂತೆ ಮಾಡಯ್ಯಾ,

ತನು ದಾಸೋಹಕ್ಕುಬ್ಬುವಂತೆ ಮಾಡು,

ಮನ ದಾಸೋಹಕ್ಕೆ ಲೀಯವಹಂತೆ ಮಾಡು,

ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ

ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,

ಪರಿಣಾಮಿಸುವಂತೆ ಮಾಡು, ಕೂಡಲಸಂಗಮದೇವಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.