ಬೆಂಗಳೂರು: ಬಸವ ಪರಿಷತ್ ನೀಡುವ 2025ನೇ ಸಾಲಿನ ‘ಬಸವ ಪುರಸ್ಕಾರ’ ಪ್ರಶಸ್ತಿಯನ್ನು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸೇರಿ ವಿವಿಧ ಕ್ಷೇತ್ರಗಳ 15 ಸಾಧಕರಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಶನಿವಾರ ಪ್ರದಾನ ಮಾಡಿದರು.
ಪರಿಸರ ಕ್ಷೇತ್ರದಿಂದ ಅಲ್ಮಿತ್ರಾ ಪಟೇಲ್, ನ್ಯಾಯಾಂಗ ಕ್ಷೇತ್ರದಿಂದ ರವಿವರ್ಮ ಕುಮಾರ್, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಿಂದ ಎಸ್.ಆರ್.ಪಾಟೀಲ, ಸಹಕಾರ ಮಹಿಳಾ ಸಬಲೀಕರಣ ಕ್ಷೇತ್ರದಿಂದ ಎಂ.ಎನ್.ರಾಜೇಂದ್ರ ಕುಮಾರ್, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಿಂದ ಉಮಾಶ್ರೀ, ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಿಂದ ಮಾನಂದಿ ರಮೇಶ್, ಬಸವರಾಜ ಎಸ್. ದೇಶಮುಖ, ವಿ.ಎಸ್.ವಿ. ಪ್ರಸಾದ್, ಎಸ್.ಪಿ. ದಯಾನಂದ್, ಬಸವರಾಜ ಧನ್ನೂರ, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಿಂದ ಶಾಮನೂರು ಎಸ್. ಗಣೇಶ್, ಶಿಕ್ಷಣ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಬಸವರಾಜ್ ಎಸ್. ದೇಶಮುಖ, ವೈದ್ಯಕೀಯ ಕ್ಷೇತ್ರದಿಂದ ಡಾ. ನಾಗರಾಜಯ್ಯ ಎನ್., ಸಮಾಜ ಸೇವೆ ಕ್ಷೇತ್ರದಿಂದ ರವಿಕುಮಾರ ಸ್ವಾಮಿ ಹಿರೇಮಠ, ಸಾಹಿತ್ಯ ಮತ್ತು ಸರ್ಕಾರಿ ಸೇವೆ ಕ್ಷೇತ್ರದಿಂದ ಬಸವರಾಜ ಯಲಿಗಾರ ಅವರು ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಎ.ಎಸ್. ಕಿರಣ್ ಕುಮಾರ್, ಬಸವ ಪರಿಷತ್ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಿದ ಪ್ರಕ್ರಿಯೆಯೇ ಕುತೂಹಲ ಮೂಡಿಸು
ತ್ತದೆ. ಯಾವುದೇ ಅಪಸ್ಪರಕ್ಕೆ ಆಸ್ಪದ ಇಲ್ಲದಂತೆ ಆಯ್ಕೆ ಮಾಡುವುದೇ ಇಂದು ಸವಾಲಿನ ಕೆಲಸ. ಅಂತಹ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದೆ. ಪ್ರಶಸ್ತಿ ನೀಡುವ ಮೂಲಕ ಎಲ್ಲರ ಜವಾ
ಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದರು.
ಬಸವ ಪರಿಷತ್ ಅಧ್ಯಕ್ಷೆ ರೇಖಾ ಮಹಾಂತೇಶ್ ಹಿರೇಮಠ, ಗೌರವಾಧ್ಯಕ್ಷೆ ಎಂ.ಪಿ. ಉಮಾದೇವಿ ಉಪಸ್ಥಿತರಿದ್ದರು.
‘ಭ್ರಷ್ಟಾಚಾರಕ್ಕೆ ಕಾಯಕ ಸಂಸ್ಕೃತಿಯೇ ಮದ್ದು
ವಸ್ತುಗಳನ್ನು ಅತಿಯಾಗಿ ಪ್ರೀತಿಸುವ ಭೌತಿಕ ಜೀವನ ಆವಾಂತರಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಕಲಿತಾಗ ಜೀವನ ಪ್ರೀತಿ ಹುಟ್ಟುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ದುರಾಸೆ ಬಿಟ್ಟು ಪ್ರಾಮಾಣಿಕವಾಗಿ ದುಡಿದು ತಿನ್ನುವ ಶರಣರ ಕಾಯಕ ಸಂಸ್ಕೃತಿ ಅಳವಡಿಸಿಕೊಂಡರೆ ಭ್ರಷ್ಟಾಚಾರ ತನ್ನಿಂದ ತಾನಾಗಿಯೇ ಕೊನೆಗೊಳ್ಳುತ್ತದೆ.
ದೇಶದಲ್ಲಿ ತಾಂಡವಾಡುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ಮನುಷ್ಯರ ಅತಿಯಾದ ದುರಾಸೆಯೇ ಕಾರಣ. ಮೊದಲು ಸರ್ಕಾರಿ ನೌಕರಿಯೊಂದು ಸಿಕ್ಕರೆ ಸಾಕು ಎನ್ನುವ ಜನರು ನಂತರ ವೈಭೋಗದ ಜೀವನಕ್ಕೆ ಬಿದ್ದು ಲಂಚ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಭ್ರಷ್ಟಾಚಾರಕ್ಕೆ ಕಾಯಕ ಸಂಸ್ಕೃತಿಯೇ ಮದ್ದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.