ADVERTISEMENT

'ಸಂವಿಧಾನ ಶಿಲ್ಪಿ' ಪದ ಬಿಟ್ಟಿರುವುದು ತಪ್ಪು: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 6:59 IST
Last Updated 6 ಜೂನ್ 2022, 6:59 IST
   

ಕಾರವಾರ: 'ಪ‌ಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಪಠ್ಯಪುಸ್ತಕದಿಂದ ಅಂಬೇಡ್ಕರ್ ಅವರ ಹೆಸರಿನ ಮುಂದೆ ಇದ್ದ ಸಂವಿಧಾನ ಶಿಲ್ಪಿ ಪದ ತಗೆದಿರುವುದು ತಪ್ಪು. ಅಂತೆಯೇ ಸಾವಿತ್ರಿಬಾಯಿ ಫುಲೆ ಪಾಠವನ್ನು ತೆಗೆದಿರುವುದು ಸರಿಯಲ್ಲ. ಇದು ಯಾರೇ ಮಾಡಿದ್ದರೂ ತಪ್ಪಾಗುತ್ತದೆ' ಎಂದು ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಠ್ಯಪುಸ್ತಕ ಪರಿಷ್ಕರಣೆಯ ಗಲಾಟೆ ನಡೆದಿದ್ದು ಕೇವಲ ರಾಜಕೀಯಕ್ಕಾಗಿ. ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣದ ವಿಷಯದಲ್ಲಿ ವಿವಾದ ಮಾಡಬಾರದು. ಆರ್.ಎಸ್.ಎಸ್ ಸಂಸ್ಥಾಪಕ ಹೆಡ್ಗೇವಾರ್ ಅವರ ಬಗ್ಗೆ ಪಾಠ ಸೇರಿಸಿದ್ದರಿಂದ ಮಕ್ಕಳಲ್ಲಿ ಕೋಮು ಭಾವನೆ ಬೆಳೆಯುತ್ತದೆ ಎಂಬುದು ಸುಳ್ಳು. ನಾನದನ್ನು ಒಪ್ಪುವುದಿಲ್ಲ' ಎಂದು ಹೇಳಿದರು.

ಜಾತಿ ಬಿಟ್ಟು ಯಾರು ರಾಜಕೀಯ ಮಾಡ್ತಾರೆ?:
'ಯಾವ ಪಕ್ಷದಲ್ಲಿ ಜಾತಿ ಬಿಟ್ಟು ರಾಜಕೀಯ ಮಾಡ್ತಾರೆ ಹೇಳಿ? ಪಕ್ಷಕ್ಕೆ ಸೇರುವಾಗಲೇ ಯಾವ ಜಾತಿ, ಎಷ್ಟು ದುಡ್ಡು ತರ್ತೀರಿ ಎಂದು ಕೇಳ್ತಾರೆ. ನಾನು ಶಿಕ್ಷಕರನ್ನು ಹೆದರಿಸಿ ಬೆದರಿಸಿ ಗೆಲ್ಲುತ್ತಿದ್ದೇನೆ ಎಂದು ಸುಳ್ಳು. ನಾನು ಹಾಗೆ ಮಾಡಿದ್ದರೆ ಯಾರು ಮತ ಕೊಡ್ತಾರೆ? ನಾನು ಶಿಕ್ಷಕರಿಗೆ ಅನ್ಯಾಯವಾದರೆ ಕಣ್ಮುಚ್ಚಿ ಕೂರುವುದಿಲ್ಲ. ನಾನು ಜಾತಿ, ದುಡ್ಡು ರಾಜಕಾರಣ ಮಾಡಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೋಟಿಸ್ ಸರಿಯಲ್ಲ:
ಚುನಾವಣೆಯಲ್ಲಿ ಪ್ರಚಾರ ಮಾಡಿದ ಆರೋಪದಲ್ಲಿ ತಹಶೀಲ್ದಾರ್, ಮುಂಡಗೋಡದ ಶಿಕ್ಷಕರಿಗೆ ನೋಟಿಸ್ ನೀಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಪ್ರಚಾರದಲ್ಲಿ ಭಾಗವಹಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗೆ ಅವಕಾಶವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಜೊತೆ ಮಾತನಾಡಿದ್ದೇನೆ. ಪರಿಶೀಲಿಸುವುದಾಗಿ ತಿಳಿಸಿದ್ದಾರೆ' ಎಂದು ಹೇಳಿದರು.

'ಈ ಬಾರಿ ನಾನು ಮತ್ತು ಬಿ.ಜೆ.ಪಿ ಒಟ್ಟಾಗಿರುವ ಕಾರಣ ಮತ್ತಷ್ಟು ಬಲ ಬಂದಿದೆ. ನನ್ನ ಗೆಲುವು ಖಂಡಿತ. ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ 10 ತಂಡಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕಣದಲ್ಲಿ ಏಳು ಜನರಿದ್ದು, ನಾಲ್ವರು ಯಾರೆಂದು ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಅಭ್ಯರ್ಥಿಗಳ ಹೊರತಾಗಿ ಉಳಿದವರೆಲ್ಲರೂ ಗೌಣ' ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, 'ಜಿಲ್ಲೆಯಲ್ಲಿ 3,500 ಮತಗಳಿದ್ದು, ಶೇ 90ರಷ್ಟು ಮತಗಳು ಹೊರಟ್ಟಿಯವರಿಗೆ ಸಿಗಲಿವೆ. ಶಿಕ್ಷಣ ದೇಶದ ಬುನಾದಿ. ಈ ಕ್ಷೇತ್ರ ಸರಿಯಾಗದಿದ್ದರೆ ದೇಶಕ್ಕೆ ಕಷ್ಟವಿದೆ' ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಪ್ರಮುಖರಾದ ಎನ್.ಎಸ್.ಹೆಗಡೆ, ಗೋವಿಂದ ನಾಯ್ಕ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.