ADVERTISEMENT

ಲಂಡನ್‌ನಲ್ಲಿ ಬಸವರಾಜ ಹೊರಟ್ಟಿ, ಯು.ಟಿ. ಖಾದರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 11:18 IST
Last Updated 17 ಅಕ್ಟೋಬರ್ 2023, 11:18 IST
ಲಂಡನ್‌ನ ಥೇಮ್ಸ್ ನದಿಯ ತಟದಲ್ಲಿ ನಿರ್ಮಿಸಿದ ಬಸವಣ್ಣನವರ ಪ್ರತಿಮೆ ಸ್ಥಳದ ಆವರಣದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ಸನ್ಮಾನಿಸಲಾಯಿತು
ಲಂಡನ್‌ನ ಥೇಮ್ಸ್ ನದಿಯ ತಟದಲ್ಲಿ ನಿರ್ಮಿಸಿದ ಬಸವಣ್ಣನವರ ಪ್ರತಿಮೆ ಸ್ಥಳದ ಆವರಣದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ಸನ್ಮಾನಿಸಲಾಯಿತು   

ಲಂಡನ್: ‘ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಚಿಂತನೆಗಳು, ಸಂದೇಶಗಳು ಸರ್ವಕಾಲಿಕ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಲಂಡನ್‌ನ ಬಸವ ಬಳಗದ ವತಿಯಿಂದ ಥೇಮ್ಸ್ ನದಿಯ ತಟದಲ್ಲಿ ನಿರ್ಮಿಸಿದ ಬಸವಣ್ಣನವರ ಪ್ರತಿಮೆ ಸ್ಥಳದ ಆವರಣದಲ್ಲಿ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಬಸವಣ್ಣನವರ 12ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆ ಇಂದು ಇಡೀ ಜಗತ್ತು ಒಪ್ಪಿ ಪಾಲಿಸುತ್ತಿದೆ. ಅಂದೆ ಸಮ ಸಮಾಜದ ಕನಸನ್ನು ಕಂಡ ಬಸವಣ್ಣನವರ ಚಿಂತನೆಗಳು ಇಂದು ಎಲ್ಲ ವರ್ಗದ ಹಿತಕ್ಕಾಗಿ ಅವರ ಸಂದೇಶಗಳು ಉಪಯುಕ್ತವಾಗಿವೆ. ಸಮೃದ್ಧ ಸಮಾಜ ಕಟ್ಟಲು ಕಾಯಕವೊಂದೇ ದಿವ್ಯ ಔಷಧಿ. ಲಂಡನ್ನಿನಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡದ ನೆಲ ಜಲ ಭಾಷೆ ಪ್ರೀತಿಯ ಬಗ್ಗೆ ಇಟ್ಟುಕೊಂಡಿರುವ ಅವರ ಕಾಳಜಿಯನ್ನು ಅಭಿನಂದಿಸುವೆ ಎಂದು ಹೇಳಿದರು.

ADVERTISEMENT

ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ‘ಇಂಗ್ಲೆಂಡಿನ ಪ್ರಧಾನಿಯಾಗಿರುವ ರಿಷಿ ಸುನಕ್ ಅವರು ಕರ್ನಾಟಕದ ಅಳಿಯನಾಗಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ. ಅವರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

ಲಂಡನ್‌ನ ಬಸವ ಬಳಗದ ವತಿಯಿಂದ ಕನ್ನಡಿಗರಾದ ಲಂಡನ್ನಿನ ಮಾಜಿ ಮೇಯರ್ ಹಾಗೂ ಬಸವ ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಡಾ.ನೀರಜ್ ಪಾಟೀಲ ಸ್ವಾಗತಿಸಿ ಮಾತನಾಡಿ, ‘ನಾವು ಕನ್ನಡಿಗರು ಎಂದು ಎನಿಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಾವು ಎಲ್ಲೇ ಇದ್ದರೂ ನಮ್ಮ ನೆಲ, ಜಲ, ಭಾಷೆ ನಮ್ಮ ಪೂರ್ವಿಕರನ್ನು  ನಿತ್ಯ ಸ್ಮರಿಸಿಕೊಂಡೆ ನಮ್ಮ ದೈನಂದಿನ ಕೆಲಸಗಳನ್ನು ಇಲ್ಲಿ ಮಾಡುತ್ತಿದ್ದೇವೆ. ನಮ್ಮ ದೇಹ ಇಲ್ಲಿದ್ದರೂ ನಮ್ಮ ಮನಸೆಲ್ಲಾ ಕನ್ನಡದ ನೆಲದಲ್ಲಿಯೇ ಹರಿದಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.