ADVERTISEMENT

ಬಿಬಿಎಂ‍‍ಪಿ ಬದಲು 2–7 ಪಾಲಿಕೆ?: ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 0:35 IST
Last Updated 25 ಫೆಬ್ರುವರಿ 2025, 0:35 IST
<div class="paragraphs"><p>ಬಿಬಿಎಂಪಿ ಕೇಂದ್ರ ಕಚೇರಿ</p></div>

ಬಿಬಿಎಂಪಿ ಕೇಂದ್ರ ಕಚೇರಿ

   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಕನಿಷ್ಠ ಎರಡರಿಂದ ಗರಿಷ್ಠ ಏಳು ಸಣ್ಣ ಪಾಲಿಕೆಗಳಾಗಿ ವಿಂಗಡಣೆ ಮಾಡುವಂತೆ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.

‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ– 2024’ ಅನ್ನು ಪರಿಶೀಲಿಸಿ ವರದಿ ಸಲ್ಲಿಸಲು ಶಾಸಕ ರಿಜ್ವಾನ್‌ ಅರ್ಷದ್‌ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಈ ಶಿಫಾರಸು ಮಾಡಿದೆ.

ADVERTISEMENT

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ರಿಜ್ವಾನ್ ಅರ್ಷದ್ ಅವರು ಈ ಕುರಿತ ವರದಿಯನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ರಿಜ್ವಾನ್ ಅವರು, ‘ಸಣ್ಣ ಪಾಲಿಕೆಗಳು ಉತ್ತಮ ಅಭಿವೃದ್ಧಿ, ದಕ್ಷ ಆಡಳಿತಕ್ಕೆ ಪೂರಕ ಆಗಲಿವೆ. ಒಂದೇ ಬಾರಿಗೆ ಏಳು ಪಾಲಿಕೆ ರಚನೆ ಮಾಡಬೇಕು ಎಂದಿಲ್ಲ. ಈ ಬಗ್ಗೆ ಸಂದರ್ಭಕ್ಕೆ ಅನುಗುಣವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕೆಂದು ಶಿಫಾ ರಸು ಮಾಡಿದ್ದೇವೆ’ ಎಂದರು.

‘ಐದು ತಿಂಗಳು ಈ ಮಸೂದೆಗೆ ಸಂಬಂಧಿಸಿದಂತೆ ವಿವಿಧ ಕಡೆ ಸಭೆಗಳನ್ನು ನಡೆಸಿದ್ದೇವೆ‌.‌ ಕಾನೂನು ತಜ್ಞರು, ಬೆಂಗಳೂರು ನಗರವನ್ನು ಬಲ್ಲವರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಸಾರ್ವಜನಿಕರಿಂದಲೂ ಸಲಹೆ, ಸೂಚನೆ ಅಭಿಪ್ರಾಯ ಸಂಗ್ರಹಿಸಿದ್ದೇವೆ’ ಎಂದು ರಿಜ್ವಾನ್ ಅರ್ಷದ್ ಹೇಳಿದರು.

‘ಬೆಂಗಳೂರು ನಗರ ದೇಶದ ಆರ್ಥಿಕತೆಯ ಕೇಂದ್ರ ಬಿಂದು. ಹಲವರಿಗೆ ಕನಸಿನ ನಗರ. ಅದಕ್ಕೆ ಪೂರಕವಾದ ಆಡಳಿತ ಶಕ್ತಿ, ಜನರಿಗೆ ಅಗತ್ಯವಾದ ಸವಲತ್ತು ಕೊಡುವ ಆಡಳಿತಾತ್ಮಕ ಮಾದರಿಯೊಂದನ್ನು ಸಿದ್ಧಪಡಿಸಬೇಕಿತ್ತು. ಹಾಲಿ ಬಿಬಿಎಂಪಿಯಿಂದ ಜನರಿಗೆ ಸಹಾಯ ಆಗುತ್ತಿದೆಯೇ ಎಂದು ಕೇಳಿದಾಗ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಬೇಕೆಂದು ಒಕ್ಕೊರಲಿನ ಸಲಹೆ ನೀಡಿದ್ದಾರೆ‌. ಒಂದೇ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದರು.

‘ಸದ್ಯ ಬಿಬಿಎಂಪಿ 870 ಚದರ ಕಿ.ಮೀ. ವ್ಯಾಪ್ತಿಯಲ್ಲಿದ್ದು, 1.51 ಕೋಟಿ ಜನಸಂಖ್ಯೆಯಿದೆ. ಬೆಂಗಳೂರಿನಲ್ಲಿರುವ ವಿವಿಧ ನಗರ ಮೂಲಸೌಕರ್ಯ ಕಲ್ಪಿಸುವ ಸಂಸ್ಥೆಗಳ ಮಧ್ಯೆ ಸಮನ್ವಯ ಇಲ್ಲ. ಸಮನ್ವಯ ಸಾಧಿಸಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡಬೇಕಿದೆ. ವಿಧಾನಸಭಾ ಕ್ಷೇತ್ರವಾರು ‘ಸಮಾಲೋಚನಾ ಸಮಿತಿ’ ರಚಿಸಲೂ ಸಲಹೆ ನೀಡಿದ್ದೇವೆ. ಸಣ್ಣ ಪಾಲಿಕೆಗಳನ್ನು ರಚಿಸಿ ಪ್ರತಿ ಪಾಲಿಕೆಗಳಲ್ಲಿ ಲೆಕ್ಕಪರಿಶೋಧನೆ ಮಾಡಬೇಕೆಂದು ಶಿಫಾರಸು ಮಾಡಿದ್ದೇವೆ. ಮೇಯರ್ ಅಧಿಕಾರಾವಧಿ 30 ತಿಂಗಳು ಇರಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಲಹೆ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಮುಖ್ಯಮಂತ್ರಿ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಪ್ರಾಧಿಕಾರದ ಉಪಾಧ್ಯಕ್ಷರಾಗಿರುತ್ತಾರೆ. ಮೆಟ್ರೊ, ಬಿಡಿಎ, ಜಲಮಂಡಳಿ ಯಥಾರೀತಿ ಮುಂದುವರಿಯಲಿವೆ. ಪಾಲಿಕೆ ವಿಂಗಡಣೆ ಮಾಡುವಾಗ ಆದಾಯ ಸಂಗ್ರಹವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹೀಗೆ ರಚನೆಯಾಗುವ ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತೆ ಇರಬೇಕು. ಆದಾಯ ಕೊರತೆ ಆಗದಂತೆ ಪಾಲಿಕೆ ರಚನೆ ಮಾಡಲು ಸಲಹೆ ಮಾಡಿದ್ದೇವೆ’ ಎಂದರು.

‘ಬಿಜೆಪಿಯವರಿಂದ ಸಮ್ಮತಿ’
‘ಸಮಿತಿಯಲ್ಲಿರುವ ಬಿಜೆಪಿ ಸದಸ್ಯರೂ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎಲ್ಲರೂ ವರದಿಗೆ ಸಹಿ ಮಾಡಿದ್ದಾರೆ. ಈ ಹಿಂದೆ ಮಂಡಿಸಿದ್ದ ಮಸೂದೆಯಲ್ಲಿ ಪಾಲಿಕೆ ವ್ಯಾಪ್ತಿಯ ಆದಾಯವು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಬರುವ ಅಂಶ ಇತ್ತು. ಅದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯಾ ಪಾಲಿಕೆಗೆ ನೇರವಾಗಿ ಆದಾಯ ಸಂದಾಯ ಆಗಬೇಕು ಎಂಬ ಬಿಜೆಪಿಯವರ ಸಲಹೆಯನ್ನು ಒಪ್ಪಿ ವರದಿಯಲ್ಲಿ ಶಿಫಾರಸು ಮಾಡಿದ್ದೇವೆ’ ಎಂದು ರಿಜ್ವಾನ್‌ ಅರ್ಷದ್‌ ತಿಳಿಸಿದರು. ‘ಹೊಸ ಪಾಲಿಕೆಗಳಿಗೆ ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ... ಹೀಗೆ ಹೆಸರು ಇರಬೇಕು. ಆದಾಯ ಸಂಗ್ರಹದ ಮಾನದಂಡದ ಆಧಾರದಲ್ಲಿ ಪಾಲಿಕೆಗಳನ್ನು ರಚನೆ ಮಾಡಬೇಕು. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಪಾಲಿಕೆಗೆ ಸೇರಿಸಬಹುದು ಎಂದೂ ಸಲಹೆ ನೀಡಿದ್ದೇವೆ’ ಎಂದರು.

ಆಗಸ್ಟ್‌ 15ರ ನಂತರ ಚುನಾವಣೆ: ಸರ್ಕಾರ

‘ಬೆಂಗಳೂರಿನ ಪಾಲಿಕೆಗಳಿಗೆ ಆಗಸ್ಟ್‌ 15ರ ನಂತರ ಚುನಾವಣೆ ನಡೆಯಲಿದೆ. ಆ ವೇಳೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ರಾಜ್ಯ ಚುನಾವಣಾ ಆಯೋಗಕ್ಕೆ ವಾರ್ಡ್‌, ಮೀಸಲಾತಿ ವಿವರಗಳನ್ನು ಸಲ್ಲಿಸಲಾಗುವುದು’ ಎಂದು ರಾಜ್ಯ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ.

ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹಾಗೂ ಶಿವರಾಜು ಅವರ ನಡುವೆ ನಡೆಯುತ್ತಿರುವ ಮೊಕದ್ದಮೆಗೆ ಅನ್ವಯಿಸಿದಂತೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಫೆ.22ರಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರ ‘ಬೆಂಗಳೂರು ಆಡಳಿತ ಮಸೂದೆ– 2024’ (ಜಿಬಿಎ) ಅನ್ನು ವಿಧಾನ ಮಂಡಲದಲ್ಲಿ ಮಂಡಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಲದ ಜಂಟಿ ಸಮಿತಿಯೂ ವರದಿ ಸಲ್ಲಿಸಲಿದೆ. ಮಾರ್ಚ್‌ನಲ್ಲಿ ನಡೆಯುವ ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲಾಗುತ್ತದೆ ಎಂದಿದ್ದಾರೆ.

2025ರ ಮಾರ್ಚ್‌ 31ರೊಳಗೆ ರಾಜ್ಯಪಾಲರಿಂದ ಮಸೂದೆಗೆ ಅಂಕಿತ ದೊರೆಯಲಿದೆ. ಜುಲೈ 15ರೊಳಗೆ ಪಾಲಿಕೆಗಳ ವಾರ್ಡ್‌ಗಳ ಗಡಿ ಗುರುತಿಸಿ, ಮರುವಿಂಗಡಣೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಆಗಸ್ಟ್‌ 15ರೊಳಗೆ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸಿ, ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಲು ಸಲ್ಲಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸಮಿತಿ ಸಲ್ಲಿಸಿದ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು.
–ಯು.ಟಿ. ಖಾದರ್, ವಿಧಾನಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.