ಬೆಂಗಳೂರು: ‘ಲಿಂಗಾಯತ ಸಮುದಾಯದ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ‘ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ’ ಎಂದು ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಬೀದರ್‌ನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ ಹಾಗೂ ಬೀದರ್‌ನ ರಾಘವೇಂದ್ರ ಕಾಲೋನಿಯ ರವೀಂದ್ರ ಸ್ವಾಮಿ ಸಲ್ಲಿಸಿದ್ದ ರಿಟ್ ಮೇಲ್ಮನವಿಗಳಲ್ಲಿ (ರಿಟ್ ಅಪೀಲುಗಳ ಸಂಖ್ಯೆ 200053/ 2024, 200162/2024 ಮತ್ತು 200001/2024) ಈ ಕುರಿತಂತೆ ಆದೇಶ ಹೊರಡಿಸಿದೆ.
ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ವೀರಶೈವ ಸಮುದಾಯದ ಜಂಗಮರು ಪುರೋಹಿತ ವರ್ಗಕ್ಕೆ ಸೇರಿದವರು ಮತ್ತು ಇವರೆಲ್ಲಾ ಸಸ್ಯಾಹಾರಿಗಳು. ಆದರೆ, ಬೇಡ ಜಂಗಮರು ಸಮಾಜದ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪಶ್ಯರೆಂದು ಪರಿಗಣಿಸಲಾಗುತ್ತದೆ’ ಎಂಬ ಅಂಶವನ್ನು ಸ್ಪಷ್ಟ ನುಡಿಗಳಲ್ಲಿ ದಾಖಲಿಸಿದೆ.
‘ಲಿಂಗಾಯತ ಸಮುದಾಯದ ಜಂಗಮರು ತಾವು ಬೇಡ ಜಂಗಮರು ಎಂದು ಹಕ್ಕು ಮಂಡಿಸುತ್ತಿರುವ ಬಗ್ಗೆ ಸೂಕ್ಷ್ಮ ಅವಲೋಕನ ನಡೆಸಲಾಗಿದೆ. ಜಾತಿ ಹೆಸರು ಒಂದೇ ರೀತಿ ಇದೆ ಎನ್ನುವ ಕಾರಣಕ್ಕಾಗಿ ಆ ಜಾತಿಗಳಿಗೆ ಪರಿಶಿಷ್ಟ ಜಾತಿಗಳ ಸ್ಥಾನಮಾನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಪ್ರಭುದೇವ ಮಲ್ಲಿಕಾರ್ಜುನಯ್ಯ ವರ್ಸಸ್ ರಾಮಚಂದ್ರ ವೀರಪ್ಪ ಪ್ರಕರಣದಲ್ಲಿ ತೀರ್ಮಾನಿಸಿದೆ’ ಎಂಬ ಅಂಶವನ್ನು ನ್ಯಾಯಪೀಠ ಉಲ್ಲೇಖಿಸಿದೆ.
‘ಲಿಂಗಾಯತ ವರ್ಗಕ್ಕೆ ಸೇರಿರುವ ಅರ್ಜಿದಾರ ರವೀಂದ್ರ ಸ್ವಾಮಿ, ಬೇಡ ಜಂಗಮ ಪ್ರಯೋಜನ ಪಡೆಯಲು ಹಕ್ಕು ಮಂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರ ಕುಟುಂಬದ ಒಬ್ಬರಿಗೆ ಬೇಡ ಜಂಗಮ ಪ್ರಮಾಣ ಪತ್ರ ದೊರೆತಿದೆ ಎಂದ ಮಾತ್ರಕ್ಕೆ ಇತರೆಯವರಿಗೂ ಆ ಪ್ರಮಾಣ ಪತ್ರ ನೀಡಬೇಕೆಂಬ ಅನುಮತಿಯನ್ನು ಒಪ್ಪಲಾಗದು. ಏಕೆಂದರೆ, ಅವರು ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ’ ಎಂದು ನ್ಯಾಯಪೀಠ ವಿವರಿಸಿದೆ.
ಸಮಾಜ ಕಲ್ಯಾಣ ಇಲಾಖೆ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಿ.ಜಗದೀಶ್ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ವಾದ ಮಂಡಿಸಿದ್ದರು.
‘ಮಾದಿಗ ಸಮುದಾಯಕ್ಕೆ ಒತ್ತಾಯ ಸಲ್ಲ’
‘ಯಾದಗಿರಿ ಜಿಲ್ಲೆ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಮೊಹರಂ ವೇಳೆ ಉರುಸ್ ಆಚರಿಸುವಾಗ ಹಿಂದೂ ದೇವತೆ ಕಾಶಿಮಲ್ಲಿ ಆರಾಧನೆ ನಿಮಿತ್ತ ಜಾನಪದ ನೃತ್ಯ ಅಲಾಯಿ ಭೋಸಾಯಿ ಕುಣಿತಕ್ಕೆ ಹಲಗೆ ಬಾರಿಸಿ ಎಂದು ಮಾದಿಗ ಸಮುದಾಯಕ್ಕೆ ತಾಕೀತು ಮಾಡತಕ್ಕದ್ದಲ್ಲ’ ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಮಾಡಿದೆ. ವಡಗೇರಾ ತಾಲ್ಲೂಕು ತುಮಕೂರಿನ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಗ್ರಾಮೀಣ ಘಟಕದ ಅಧ್ಯಕ್ಷ ಶಾಂತಪ್ಪ ಬಿನ್ ರಾಮಪ್ಪ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ವೈ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಒಂದು ವೇಳೆ ಇಂತಹ ಸಂದರ್ಭ ಎದುರಾದರೆ ಮಾದಿಗ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ‘ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂಬ ಕಾರಣಕ್ಕೆ ತಾನು ಮಾಡಲಿಚ್ಛಿಸದ ಕೆಲಸವನ್ನು ಮುಂದುವರಿಸುವಂತೆ ಒಂದು ಸಮುದಾಯವು ಮತ್ತೊಂದು ಸಮುದಾಯಕ್ಕೆ ಒತ್ತಾಯಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ. ಪ್ರಕರಣವೇನು?: ಹಿಂದೂ-ಮುಸ್ಲಿಂ ಸಮುದಾಯದ ಜನರು ಮೊಹರಂ ಹಬ್ಬದ ಅಂಗವಾಗಿ ಕಾಶಿಮಲ್ಲಿ ದೇವಸ್ಥಾನದ ಮುಂದೆ ಅಲಾಯಿ ಭೋಸಾಯಿ ಜಾನಪದ ಕುಣಿತ ಆಚರಿಸುತ್ತಾರೆ. ಈ ವೇಳೆ ದಲಿತ ಸಮುದಾಯದವರು ಹಲಗೆ ಬಾರಿಸುತ್ತಿದ್ದರು. ‘ನಾವು ಹಲಗೆ ಬಾರಿಸುವುದಿಲ್ಲ’ ಎಂಬ ನಿರ್ಧಾರ ಪ್ರಕಟಿಸಿದ್ದ ಮಾದಿಗ ಸಮುದಾಯದವರು ಹಬ್ಬದಲ್ಲಿ ಭಾಗವಹಿಸಿದ್ದರು. ಇದು ಸಂಘರ್ಷಕ್ಕೆ ನಾಂದಿ ಹಾಡಿತ್ತು. ಈ ಹಿನ್ನೆಲೆಯಲ್ಲಿ ಕುಣಿತಕ್ಕೆ ನಿಷೇಧ ಹೇರುವಂತೆ ಮಾದಿಗ ದಂಡೋರ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಆದರೆ ‘ಈ ಸಂಬಂಧ ಯಾವುದೇ ಕ್ರಮ ಜರುಗಿಲ್ಲ’ ಎಂದು ಆಕ್ಷೇಪಿಸಿ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.