ADVERTISEMENT

ಲಾಕ್‌‌ಡೌನ್ ಬೆಳಗಾವಿ: ನವಜಾತ ಶಿಶು ಚಿಕಿತ್ಸೆಗಾಗಿ ವಿಮಾನ ಬಳಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 10:33 IST
Last Updated 15 ಏಪ್ರಿಲ್ 2020, 10:33 IST
ಬೆಳಗಾವಿ ವಿಮಾನನಿಲ್ದಾಣದಲ್ಲಿ ನವಜಾತ ಶಿಶುವನ್ನು ವೈದ್ಯಕೀಯ ತಂಡ ಕರೆತಂದ ಚಿತ್ರ
ಬೆಳಗಾವಿ ವಿಮಾನನಿಲ್ದಾಣದಲ್ಲಿ ನವಜಾತ ಶಿಶುವನ್ನು ವೈದ್ಯಕೀಯ ತಂಡ ಕರೆತಂದ ಚಿತ್ರ   

ಬೆಳಗಾವಿ: ನವಜಾತ ಶಿಶುವೊಂದನ್ನು ಚಿಕಿತ್ಸೆಗೆ ಕರೆತರುವುದಕ್ಕಾಗಿ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣವನ್ನು ಲಾಕ್‌ಡೌನ್ ನಡುವೆಯೂ ಬಳಸಲಾಗಿದೆ.

ಸೂರತ್‌ನಿಂದ ಮಂಗಳವಾರ ಮಧ್ಯಾಹ್ನ ಇಲ್ಲಿಗೆ ಬಂದಿಳಿದಿದ್ದ ವಿಮಾನ (ಏರ್ ಆಂಬ್ಯುಲೆನ್ಸ್‌), ಬುಧವಾರ ಬೆಳಿಗ್ಗೆ ನಿರ್ಗಮಿಸಿದೆ. ಈ ವಿಮಾನದಲ್ಲಿ ಶಿಶುವಿನೊಂದಿಗೆ ವೈದ್ಯಕೀಯ ಸಿಬ್ಬಂದಿ ಬಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ, ‘ಲಾಕ್‌ಡೌನ್‌ ಇದ್ದರೂ ವಿಮಾನನಿಲ್ದಾಣದಲ್ಲಿ ಕಾರ್ಗೊ, ಪರಿಹಾರ ಕಾರ್ಯಾಚರಣೆ ಹಾಗೂ ಇತರ ತುರ್ತು ಸೇವೆಗಳ ವಿಮಾನಗಳ ಹಾರಾಟಕ್ಕೆ ಅವಕಾಶವಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕನಿಷ್ಠ ಮಾನವ ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಈ ಅವಧಿ ವಿಸ್ತರಿಸಿಕೊಳ್ಳಬಹುದಾಗಿದೆ. ಮಂಗಳವಾರ ಮಧ್ಯಾಹ್ನ 3ರ ನಂತರ ಬಂದಿದ್ದ ಏರ್‌ ಆಂಬ್ಯುಲೆನ್ಸ್‌ನಲ್ಲಿ ನವಜಾತ ಶಿಶು,ವೈದ್ಯರನ್ನು ಒಳಗೊಂಡ ತಂಡ ಚಿಕಿತ್ಸೆಗೆಂದು ತಂದಿತ್ತು. ಆ ವಿಮಾನಕ್ಕೆ ಡಿಜಿಸಿಎದಿಂದ ಅನುಮತಿಯೂ ದೊರೆತಿತ್ತು. ಬುಧವಾರ ಅದು ಮರಳಿದೆ. ನಾವು ಮಾನವೀಯತೆ ದೃಷ್ಟಿಯಿಂದಾಗಿ ಪೂರಕ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಆದರೆ, ಮಗುವಿಗಿದ್ದ ಆರೋಗ್ಯ ಸಮಸ್ಯೆ ಏನು ಮತ್ತು ಯಾವ ಆಸ್ಪತ್ರೆಗೆ ಕರೆತರಲಾಗಿತ್ತು ಎನ್ನುವುದು ತಿಳಿದುಬಂದಿಲ್ಲ. ವಿಮಾನನಿಲ್ದಾಣದ ಅಧಿಕಾರಿಗಳ ಬಳಿಯೂ ಆ ಮಾಹಿತಿ ಇಲ್ಲ.ವಿಮಾನದಲ್ಲಿ ಬಂದಿದ್ದವರು ಮುಂಜಾಗ್ರತಾ ಕ್ರವವಾಗಿ ‘ಪಿಪಿಇ’ ಸುರಕ್ಷಾ ಕವಚ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.