ADVERTISEMENT

ಬೆಳಗಾವಿಯಲ್ಲೂ ನಡೆದಿತ್ತು ಹೈದರಾಬಾದ್ ಮಾದರಿ ಎನ್‌ಕೌಂಟರ್‌

2007ರಲ್ಲಿ ಪೊಲೀಸರ ಕ್ರಮ ಜನರ ಮೆಚ್ಚುಗೆ ಗಳಿಸಿತ್ತು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 12:07 IST
Last Updated 6 ಡಿಸೆಂಬರ್ 2019, 12:07 IST
   

ಬೆಳಗಾವಿ: ಇಂದು ಶುಕ್ರವಾರ ಬೆಳಗಿನ ಜಾವ ಹೈದರಾಬಾದ್‌ನಲ್ಲಿ ನಡೆದ ‘ಎನ್‌ಕೌಂಟರ್‌’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಇದೇ ರೀತಿಯ ಘಟನೆಗೆ 2007ರಲ್ಲಿ ಬೆಳಗಾವಿಯೂ ಸಾಕ್ಷಿಯಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿನ ಪಾತಕಿಗಳ ಸದ್ದಡಗಿಸಿದ ಹಾಗೂ ಭೂಗತ ಲೋಕದ ನೆಲೆಯನ್ನೇ ಧ್ವಂಸಗೊಳಿಸಿದ ಪ್ರಕರಣ ಇದಾಗಿತ್ತು.

ಪ್ರಕರಣದ ಹಿನ್ನೆಲೆ ಹಾಗೂ ಆ ಸಂದರ್ಭದ ಘಟನೆಗಳನ್ನು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ನೆನೆದಿದ್ದಾರೆ.

‘2007ರ ಅಗಸ್ಟ್‌ ತಿಂಗಳಲ್ಲಿ ನಡೆದ ವಿವಾಹಿತೆ ಅತ್ಯಾಚಾರ ಮತ್ತು ಅಮಾನುಷ ಕೊಲೆ ಪ್ರಕರಣ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅನೇಕ ಪ್ರದೇಶಗಳನ್ನು ತಲ್ಲಣಗೊಳಿಸಿತ್ತು. ಸಹಸ್ರಾರು ಮಹಿಳೆಯರು ಬೀದಿಗಿಳಿದು ಹೋರಾಟ ತೀವ್ರಗೊಳಿಸಿದ್ದರು. ಜನಸಾಮಾನ್ಯರಲ್ಲಿ ಆಕ್ರೋಶ ಮಡುಗಟ್ಟಿತ್ತು. ಜನರ ಸಿಟ್ಟೆಲ್ಲವೂ ಪೊಲೀಸ್ ಇಲಾಖೆಯ ವಿರುದ್ಧವೇ ತಿರುಗಿತ್ತು. ಆಗ ಹೇಮಂತ್‌ ನಿಂಬಾಳ್ಕರ್ ಬೆಳಗಾವಿ ಎಸ್ಪಿಯಾಗಿದ್ದರು. ಜನರ ಆಕ್ರೋಶ ಹಾಗೂ ಟೀಕಾಸ್ತ್ರಗಳನ್ನು ಎದುರಿಸುವುದೂ ಅವರಿಗೆ ಸಾಕಾಗಿ ಹೋಗಿತ್ತು’.

ADVERTISEMENT

‘ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ಅದೇ ವರ್ಷದ ಸೆ. 5ರಂದು ಪ್ರಮುಖ ಆರೋಪಿ ಪ್ರವೀಣ ಶಿಂತ್ರೆ ಎಂಬಾತ ಉಡುಪಿಯಲ್ಲಿ ಸೆರೆಸಿಕ್ಕಿದ್ದ. ಈ ಸುದ್ದಿ ಹಬ್ಬಿದಾಗ ಜನರೆಲ್ಲರೂ ಸಂಭ್ರಮಿಸಿದ್ದರು. ಬೆಳಗಾವಿಗೆ ಅವನನ್ನು ಯಾವಾಗ ಕರೆತರುತ್ತಾರೋ ಎಂದು ಸಾವಿರಾರು ಜನರು ಕಾದು ಕುಳಿತಿದ್ದರು. ಆರೋಪಿಯನ್ನು ಕರೆತರುವಾಗಲೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದನಂತೆ. ಅವನ ವಿರುದ್ಧ ಒಂದು ಪ್ರಕರಣವೂ ದಾಖಲಾಯಿತು’.

‘ಸೆ. 5ರಂದು ನಿಂಬಾಳ್ಕರ್‌ ಅವರಿಗೆ ಕರೆ ಮಾಡಿ, ಅಭಿನಂದನೆ ತಿಳಿಸಿದ್ದೆ. ಮರುದಿನ ಸೆ. 6ರಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇನೆ’ ಎಂದಿದ್ದರು. ಆದರೆ, ಸೆ. 6ರಂದು ಶಿಂತ್ರೆ ಎನ್‌ಕೌಂಟರ್‌ ಆಗಿದೆ ಎನ್ನುವ ಸುದ್ದಿ ಬಂದಿತು. ನೇರವಾಗಿ ಗಣೇಶಪುರದ ಲಕ್ಷ್ಮೀ ನಗರಕ್ಕೆ ಹೋದೆ. ಅಲ್ಲಿಯ ಮನೆಯೊಳಕ್ಕೆ ನೇರವಾಗಿ ಪ್ರವೇಶಿಸಿದೆ. ಅಲ್ಲಿಯೇ ಶಿಂತ್ರೆ ಶವ ಬಿದ್ದಿತ್ತು. ಅಲ್ಲಿ ಪೊಲೀಸ್ ಅಧಿಕಾರಿಗಳಾದ ನಾರಾಯಣ ಭರಮಣಿ, ಮಹಾಂತೇಶ ಜಿದ್ದಿ, ಶಂಕರ ಮಾರಿಹಾಳ, ಪಿ.ಜಿ. ವಾಂಡಕರ್ ಇದ್ದರು. ಆರೋಪಿಯು ಪರಾರಿಯಾಗಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ಮಾಡಿದ್ದರು! ಘಟನೆಯಿಂದಾಗಿ, ಬೆಳಗಾವಿಯ ಸಾವಿರಾರು ಮಹಿಳೆಯರು ಕುಣಿದು ಕುಪ್ಪಳಿಸಿದ್ದರು. ಪೊಲೀಸರನ್ನು ಹಾಡಿ ಹೊಗಳಿದ್ದರು. ಅಲ್ಲದೇ, ಜನರ ಕೋಪವೂ ತಣ್ಣಗಾಗಿತ್ತು’.

‘ಪಾತಕಿಗಳಿಗೆ ಇಂಥದ್ದೇ ಶಿಕ್ಷೆಯಾಗಬೇಕು; ಹತ್ಯೆಗೆ ಹತ್ಯೆಯೇ ನಿಜವಾದ ನ್ಯಾಯ’ ಎಂಬ ಘೋಷಣೆಗಳು ನಗರದಾದ್ಯಂತ ಮೊಳಗಿದ್ದವು. ನಗರದ ಜನರೆಲ್ಲರೂ ಸಂಭ್ರಮಪಟ್ಟಿದ್ದರು. ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್ ನಂತರ ಭೂಗತ ಲೋಕದ ಪಾತಕಿಗಳ ಜಂಘಾಬಲವೇ ಉಡುಗಿ ಹೋಯಿತು. ಸುಪಾರಿ ಕೊಲೆಗಳ ಹಾವಳಿ ಬಹುತೇಕ ನಿಂತು ಹೋಯಿತು’ ಎಂದು ಚಂದರಗಿ ನೆನೆದಿದ್ದಾರೆ.

ತಮ್ಮ ವಿರುದ್ಧವೇ ಶೂಟ್‌ ಮಾಡಲು ಬಂದ ಶಿಂತ್ರೆಯನ್ನು ಪೊಲೀಸರು ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಿದ್ದರು. ಹೇಮಂತ್‌ ನಿಂಬಾಳ್ಕರ್‌ ಈಗ ಐಜಿಯಾಗಿ ಬೆಂಗಳೂರಿನಲ್ಲಿದ್ದಾರೆ. ಆ ಕಾರ್ಯಾಚರಣೆಯ ತಂಡದಲ್ಲಿದ್ದ ಎನ್‌.ವಿ. ಭರಮನಿ ಹಾಗೂ ಮಹಾಂತೇಶ ಜಿದ್ದಿ ನಗರದ ಎಸಿಪಿಗಳಾಗಿದ್ದಾರೆ. ಶಂಕರ ಮಾರಿಹಾಳ ಕಾರವಾದ ಡಿವೈಎಸ್ಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.