ADVERTISEMENT

‘ಲವ್‌ ಜಿಹಾದ್‌’ ತಡೆಗೂ ಮಸೂದೆ: ಈಶ್ವರಪ್ಪ, ಸುನಿಲ್‌ ಕುಮಾರ್‌ ದೃಢ ನುಡಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:34 IST
Last Updated 13 ಡಿಸೆಂಬರ್ 2021, 22:34 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧಕ್ಕೆ ತರಲು ಉದ್ದೇಶಿಸಿರುವ ಮಸೂದೆ ಚರ್ಚೆಗೆ ಗುರಿಯಾಗಿರುವ ಬೆನ್ನಲ್ಲೇ ‘ಲವ್‌ ಜಿಹಾದ್‌’ ತಡೆಗೂ ಮಸೂದೆಯೊಂದನ್ನು ಮಂಡಿಸಲು ಸರ್ಕಾರ ಮುಂದಾಗಿದೆ. ಸಚಿವರಾದ ಕೆ.ಎಸ್‌. ಈಶ್ವರಪ್ಪ ಮತ್ತು ವಿ. ಸುನಿಲ್‌ ಕುಮಾರ್‌ ಅವರು ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಮತಾಂತರ ನಿಷೇಧ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ವಿಷಯ ಇನ್ನೂ ಸದನದ ಕಲಾಪ ಪಟ್ಟಿಯಲ್ಲಿ ಸೇರಿಲ್ಲ. 11 ಮಸೂದೆಗಳನ್ನು ಮಂಡಿಸುವುದಾಗಿ ಕಲಾಪ ಸಲಹಾ ಸಮಿತಿಯಲ್ಲಿ ತಿಳಿಸಿರುವ ಸರ್ಕಾರ, ಒಂಬತ್ತು ಮಸೂದೆಗಳ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದೆ.

ಮತಾಂತರ ನಿಷೇಧ ಮಸೂದೆ ಜತೆಯಲ್ಲೇ ‘ಲವ್‌ ಜಿಹಾದ್’ ನಿಯಂತ್ರಣಕ್ಕೂ ಪ್ರತ್ಯೇಕ ಮಸೂದೆಯನ್ನು ಮಂಡಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ADVERTISEMENT

‘ಎರಡೂ ಮಸೂದೆಗಳನ್ನು ಅಧಿವೇಶನದ ಕೊನೆಯ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಂಚಾಯತ್‌ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ‘ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ತಡೆಯಲು ನಾವುಅಧಿಕಾರದಲ್ಲಿದ್ದಾಗ ಈ ಕಾನೂನು ಮಾಡದಿದ್ದರೆ ಹೇಗೆ? ನಮಗೆ ಬಹುಮತ ಇದೆ. ಎರಡೂ ಮಸೂದೆಗಳನ್ನು ಮಂಡಿಸುತ್ತೇವೆ’ ಎಂದರು.

‘ಲವ್ ಜಿಹಾದ್‌ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮದುವೆಯಾಗಿ ಬೀದಿಗೆ ಬಿಡುತ್ತಿದ್ದಾರೆ. ವಿದೇಶಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಭಾರತ ಪಾಕಿಸ್ತಾನ ಆಗಲು ಬಿಡುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಬಂದಿರುವುದಕ್ಕಾಗಿ ಈ ಮಸೂದೆಗಳನ್ನು ಮಂಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದವರನ್ನು ಓಲೈಕೆ ಮಾಡಿ, ಮತ ಪಡೆಯಲು ಅವರು ಹಾಗೆ ಹೇಳಿದ್ದಾರೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಬಿಜೆಪಿಗೆ ಸ್ಪಷ್ಟತೆ ಇದೆ: ಇಂಧನ ಸಚಿವ ವಿ. ಸುನಿಲ್ ಕುಮಾರ್, ‘ಗೋಹತ್ಯೆ ನಿಷೇಧ ಕಾಯ್ದೆ ತರುವುದಾಗಿ ಬಿಜೆಪಿ ಮೊದಲಿನಿಂದಲೂ ಹೇಳಿತ್ತು. ಅದನ್ನು ನಮ್ಮ ಸರ್ಕಾರ ಮಾಡಿದೆ. ಮತಾಂತರ ನಿಷೇಧ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನೂ ತರುತ್ತೇವೆ. ಈ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟತೆ ಇದೆ’ ಎಂದರು. ಯಾವ ಕಾರಣಕ್ಕೆ ಮತಾಂತರ ಆಗುತ್ತಿದೆ? ಅದರ ದುಷ್ಪರಿಣಾಮ ಏನು ಎಂಬುದು ಗೊತ್ತಿದೆ? ಮತಾಂತರ ನಿಷೇಧ ಮಸೂದೆಯನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ನವರಿಗೂ ಇಷ್ಟವಿದೆ’
‘ಮತಾಂತರ ನಿಷೇಧ ಕಾಯ್ದೆ ತರುವುದು ಕಾಂಗ್ರೆಸ್‌ನ ಕೆಲವರಿಗೆ ಇಷ್ಟವಿದೆ. ಅವರೆಲ್ಲರೂ ಈ ಮಸೂದೆಯನ್ನು ಸ್ವಾಗತ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ತರುವುದನ್ನು ಬಹಳಷ್ಟು ಜನ ಬಯಸಿದ್ದಾರೆ’ ಎಂದು ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಮಂಡಿಸಬೇಕು. ಕಾಂಗ್ರೆಸ್‌ ಪಕ್ಷ ಅನಗತ್ಯವಾಗಿ ವಿರೋಧ ಮಾಡದೆ ಮಸೂದೆ ಅಂಗೀಕಾರಕ್ಕೆ ಸಹಕಾರ ನೀಡಬೇಕು’ ಎಂದರು.

ಹಲವು ರಾಜ್ಯಗಳಲ್ಲಿ ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಈಗ ರಾಜ್ಯದಲ್ಲೂ ತರಲಾಗುತ್ತಿದೆ. ಬಿಜೆಪಿ ಸರ್ಕಾರ ಮಂಡಿಸುವ ಮಸೂದೆಗಳನ್ನು ವಿರೋಧಿಸುವುದು ಸಿದ್ದರಾಮಯ್ಯ ಅವರ ಸ್ವಭಾವ ಎಂದು ಹೇಳಿದರು.

‘ಮಸೂದೆ ಹಿಂದೆ ದುರುದ್ದೇಶ’
‘ಮತಾಂತರ ನಿಷೇಧ ಮಸೂದೆ ಹಿಂದೆ ದುರುದ್ದೇಶವಿದೆ. ಈ ಕಾನೂನು ಮತೀಯ ಗೂಂಡಾಗಿರಿಗೆ ಅವಕಾಶ ಮಾಡಿಕೊಡಲಿದೆ’ ಎಂದು ಕಾಂಗ್ರೆಸ್ ಶಾಸಕ ಕೆ.ಜೆ. ಜಾರ್ಜ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿಂದೂ ಧರ್ಮವಾಗಲಿ ಅಥವಾ ಬೇರೆ ಧರ್ಮವಾಗಲಿ ಶಕ್ತಿಯುತವಾಗಿದೆ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವೂ ಇದೆ’ ಎಂದರು.

ಮೊಘಲರು, ಡಚ್ಚರು, ಪೋರ್ಚುಗೀಸರು ದೇಶಕ್ಕೆ ಬಂದು, ಹೋದರು. ಆದರೆ, ಹಿಂದೂ ಧರ್ಮೀಯರ ಸಂಖ್ಯೆ ಕಡಿಮೆಯಾಗಿಲ್ಲ. ಕ್ರೈಸ್ತ ಧರ್ಮೀಯರ ಸಂಖ್ಯೆ ಮೊದಲಿಗಿಂತ ಕಡಿಮೆಯಾಗಿದೆ ಎಂದು ಹೇಳಿದರು.

‘ದುರುದ್ದೇಶದ ಮಸೂದೆಗೆ ವಿರೋಧ’
‘ಬಿಜೆಪಿ ಸರ್ಕಾರ ದುರುದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿದೆ. ಅದನ್ನು ನಾವು ವಿರೋಧಿಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವ್ಯಕ್ತಿ ತನಗೆ ಇಷ್ಟವಾದ ಧರ್ಮ ಅನುಸರಿಸಬಹುದು ಎಂಬ ಅಂಶ ಸಂವಿಧಾನದಲ್ಲಿದೆ. ಬಲವಂತದ ಮತಾಂತರವನ್ನೂ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೂ ಈ ಕಾಯ್ದೆ ತರುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷ ಒಂದು ಧರ್ಮದವರ ಪರವಾಗಿದೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ಎಲ್ಲರ ಪರವಾಗಿಯೂ ಇದ್ದೇವೆ. ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿರುವ ನಾವು ಎಲ್ಲರ ಪರವೂ ಮಾತನಾಡುತ್ತೇವೆ. ಒಂದು ಸಮುದಾಯ, ಧರ್ಮದ ಪರ ಇದ್ದೇವೆ ಎಂಬುದು ಸರಿಯಲ್ಲ’ ಎಂದರು.

ಮುಂದಿನ ವಾರ ಮತಾಂತರ ನಿಷೇಧ ಮಸೂದೆ?
ಮತಾಂತರವನ್ನು ನಿಷೇಧಿಸುವ ಉದ್ದೇಶಿಸಿದ ಮಸೂದೆಯನ್ನು ಮುಂದಿನವಾರ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚ, ಬಿಟ್ ಕಾಯಿನ್ ವಿಚಾರಗಳನ್ನು ಮುಂದಿನ ವಾರ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷ ಕಾಂಗ್ರೆಸ್ ತಯಾರಿ ನಡೆಸಿದೆ. ಅದೇ ಹೊತ್ತಿಗೆ, ಮತಾಂತರ ನಿಷೇಧ ಮಸೂದೆ ಮಂಡಿಸಿ, ಚರ್ಚೆಯನ್ನು ಬೇರೆ ದಿಕ್ಕಿಗೆ ತಿರುಗಿಸುವ ಆಲೋಚನೆ ಸರ್ಕಾರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

*

ಆಸೆ, ಆಮಿಷಗಳ ಮೂಲಕ ಮತಾಂತರ ಮಾಡಲಾಗುತ್ತಿದೆ. ಬಲವಂತದ ಮತಾಂತರ ನಿಷೇಧಕ್ಕೆ ಸರ್ಕಾರ ಕಾಯ್ದೆ ತರಲೇಬೇಕು.
-ಗೂಳಿಹಟ್ಟಿ ಶೇಖರ್,ಬಿಜೆಪಿ ಶಾಸಕ

*

ಮತಾಂತರ ನಿಷೇಧದ ಅಂಶ ಸಂವಿಧಾನದಲ್ಲೇ ಇದೆ. ಅದನ್ನೇ ಮಸೂದೆ ರೂಪದಲ್ಲಿ ತರಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಒಂದು ಧರ್ಮದವರ ಬಗ್ಗೆ ಮಾತ್ರ ಕಾಳಜಿ ಇದೆ.
– ಆರ್‌. ಅಶೋಕ,ಕಂದಾಯ ಸಚಿವ

*

ಬಿಜೆಪಿಯವರು ಭಾವನಾತ್ಮಕವಾಗಿ ಜನರನ್ನು ಹಿಡಿದಿಟ್ಟುಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಚುನಾವಣೆ ಬರುತ್ತಿದ್ದಂತೆ ಇವರು ಇದನ್ನೇ ಮಾಡುವುದು.
-ಸಿ.ಎಂ. ಇಬ್ರಾಹಿಂ,ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.