ADVERTISEMENT

ಮಹಾರಾಷ್ಟ್ರ–ಕರ್ನಾಟಕದ ಗಡಿ ವಿವಾದ: ಅಮಿತ್ ಶಾ ಜೊತೆ ಸಂಸದರ ಸಮಾಲೋಚನೆ ಡಿ. 12ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 15:46 IST
Last Updated 10 ಡಿಸೆಂಬರ್ 2022, 15:46 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಮಂಗಳೂರು: ‘ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ವಿವಾದಕ್ಕೆ ಸಂಬಂಧ ರಾಜ್ಯದ ಎಲ್ಲ ಸಂಸದರು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಇದೇ 12ರಂದು ಭೇಟಿಯಾಗಿ ಚರ್ಚಿಸಲಿದ್ದಾರೆ. ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಗೃಹ ಸಚಿವರು ಇದೇ 14ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಗಡಿ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆಯನ್ನು ನೂರಕ್ಕೆ ನೂರು ಮಾಡುತ್ತೇವೆ. ಅಷ್ಟೇ ಅಲ್ಲ; ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆಯನ್ನೂ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಮಹಾರಾಷ್ಟ್ರ ಗಡಿಯ ಆಚೆಗೂ ರಾಜ್ಯದ ಬಸ್‌ಗಳು ಸಂಚರಿಸುತ್ತಿವೆ. ಅವುಗಳ ಭದ್ರತೆಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದ್ದೇವೆ’ ಎಂದರು.

ADVERTISEMENT

‘ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನುಬೆಳಗಾವಿಯಲ್ಲಿ ನಡೆಸುವ ಸಂದರ್ಭದಲ್ಲಿ ಪ್ರತಿಬಾರಿಯೂ ಎಂಇಎಸ್‌ನವರು ಅಲ್ಲಿ ಸಮಾವೇಶ ನಡೆಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವಕಾಶ ಕೊಟ್ಟಿಲ್ಲ. ಇನ್ನು ಮುಂದೆಯೂ ಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದವರ ವಿರುದ್ಧ ರಾಜ್ಯದಲ್ಲಿ ಕೈಗೊಂಡ ದಿಟ್ಟ ಕ್ರಮಗಳು ಪ್ರಭಾವ ಬೀರಿವೆ. ಸುಮಾರು 15 ಸ್ಲೀಪರ್‌ ಸೆಲ್‌ಗಳನ್ನು ಭೇದಿಸಿದ್ದೇವೆ. ಕೆಲವರನ್ನು ಬಿಹಾರ್ ಜೈಲಿಗೆ ಅಟ್ಟಿದ್ದೇವೆ. ತಮಿಳುನಾಡಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವರನ್ನೂ ಸೆರೆ ಹಿಡಿದಿದ್ದೇವೆ. ಅವರ ಸಂಪರ್ಕ ಕೊಂಡಿಗಳನ್ನು, ವಿದೇಶದ ನಂಟನ್ನೂ ಪತ್ತೆ ಹಚ್ಚಲು ರಾಜ್ಯದ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಹೇಳುವುದು ಸರಿಯಲ್ಲ’ ಎಂದರು.

ಶಿರಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿಕೊಡುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿತ್ತು. ಈ ಬಗ್ಗೆ ಈ ವಾರದ ಒಳಗೆ ವಿಶೇಷ ಸಭೆ ಕರೆಯುತ್ತೇನೆ. ಹೆದ್ದಾರಿ ಏಕೆ ಸಂಪೂರ್ಣ ಹದಗೆಟ್ಟಿದೆ. ಕಾಮಗಾರಿ ಏಕೆ ನಿಂತಿದೆ ಎಂಬ ಬಗ್ಗೆಯೂ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಶಿರಾಡಿ ರಸ್ತೆಗೆ ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಿ, ವಾಹನ ಓಡಾಟಕ್ಕೆ ಅನುವು ಮಾಡಿಕೊಡುವುದು. ಕೆಲವು ಕಡೆ ವೈಟ್‌ಟಾಪಿಂಗ್‌ ಮಾಡುವ ಹಾಗೂ ಇನ್ನು ಕೆಲವು ಕಡೆ ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವಗಳಿವೆ. ಈ ಎಲ್ಲ ವಿಚಾರಗಳ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರನ್ನೂ ಸಭೆಗೆ ಕರೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.