ಸೋನಿಯಾ ಗಾಂಧಿ
ಪಿಟಿಐ ಚಿತ್ರ
ಬೆಳಗಾವಿ: ‘ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡೋಣ’ ಎಂದು ಪಕ್ಷದ ನಾಯಕರಿಗೆ ಕಾಂಗ್ರೆಸ್ ಸಂಸದೀಯ ಮಂಡಳಿಯ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಇಲ್ಲಿ ಗುರುವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಭಾಗವಹಿಸಲು ಸಾಧ್ಯ ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಡಬ್ಲ್ಯುಸಿ ಸದಸ್ಯರಿಗೆ ಅವರು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
‘ಐತಿಹಾಸಿಕ ಕಾರ್ಯಕ್ರಮದಲ್ಲಿ ನಿಮ್ಮೊಂದಿಗಿರಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮಕ್ಕೆ ಗೈರಾಗಿರುವ ಕಾರಣಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. 39ನೇ ಅಧಿವೇಶನ ನಡೆದ ಸ್ಥಳದಲ್ಲೇ ನೀವೆಲ್ಲಾ ಸಮಾವೇಶಗೊಂಡಿರುವುದು ಸೂಕ್ತವಾಗಿದೆ. ಗಾಂಧೀಜಿ ಇದೇ ಸ್ಥಳದಲ್ಲಿ ಅಧ್ಯಕ್ಷರಾಗಿರುವುದಕ್ಕೆ ನಮ್ಮ ಪಕ್ಷಕ್ಕೆ ಹಾಗೂ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ನೀಡಿದೆ’
‘ನವದೆಹಲಿಯಲ್ಲಿ ಅಧಿಕಾರದಲ್ಲಿ ಇರುವವರಿಂದ ಗಾಂಧೀಜಿ ತತ್ವ, ಸಿದ್ಧಾಂತಗಳಿಗೆ ಬೆದರಿಕೆ ಇದೆ. ಅಧಿಕಾರದಲ್ಲಿರುವ ಸಂಘಟನೆಗಳು ಸ್ವಾತಂತ್ರ್ಯಕ್ಕಾಗಿ ಎಂದೂ ಹೋರಾಟ ಮಾಡಲಿಲ್ಲ. ಅಲ್ಲದೆ, ಅವರು ಮಹಾತ್ಮ ಗಾಂಧಿ ಅವರನ್ನು ಕಟುವಾಗಿ ವಿರೋಧಿಸಿದವರು, ಗಾಂಧೀಜಿ ಹತ್ಯೆ ಮಾಡಿದವರನ್ನು ಸಂಭ್ರಮಿಸಿದವರು’
‘ದೇಶದ ವಿವಿಧೆಡೆ ಗಾಂಧಿ ಸಂಘ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದು, ಇಂದು ನಡೆಯುತ್ತಿರುವ ಸಭೆಯನ್ನು ‘ನವ ಸತ್ಯಾಗ್ರಹ ಬೈಠಕ್’ ಎಂದು ಕರೆದಿರುವುದು ಸೂಕ್ತವಾಗಿದೆ. ಅಂತಹ ಶಕ್ತಿಗಳ ವಿರುದ್ಧ ರಾಜಿಯಾಗದೆ ಹೋರಾಟ ನಡೆಸುವ ನಿರ್ಣಯ ಮಾಡುವುದು ಸಂಕಲ್ಪ ಮತ್ತು ಕರ್ತವ್ಯ’ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.