ADVERTISEMENT

ಅಂಗವಿಕಲರ ಸಬಲೀಕರಣ: ₹ 127.89 ಕೋಟಿ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 22:02 IST
Last Updated 14 ಡಿಸೆಂಬರ್ 2021, 22:02 IST

ಬೆಳಗಾವಿ (ಸುವರ್ಣ ವಿಧಾನಸೌಧ): 2018–19ರಿಂದ 2020–21ರವರೆಗೆ ಅಂಗವಿಕಲರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಒದಗಿಸಿದ್ದ ಅನುದಾನದಲ್ಲಿ ₹127.89 ಕೋಟಿ ಬಳಕೆಯಾಗದೇ ಉಳಿದಿದೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಹಣಮಂತ ನಿರಾಣಿ ಮತ್ತು ಅರುಣ್‌ ಶಹಾಪೂರ ಅವರ ಪ‍್ರಶ್ನೆಗಳಿಗೆ ಉತ್ತರ ನೀಡಿದ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವ ಹಾಲಪ್ಪ ಆಚಾರ್‌ ಈ ಮಾಹಿತಿ ನೀಡಿದರು. ಮೂರು ವರ್ಷಗಳ ಅವಧಿಯಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ₹ 1654 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಈ ಪೈಕಿ ₹1,525 ಕೋಟಿ ಮಾತ್ರ ಬಳಕೆಯಾಗಿದೆ ಎಂದು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೂ ನೆರವು
ಸ್ವಯಂ ಉದ್ಯೋಗ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ನೆರವು ನೀಡುವ ಯೋಜನೆಯಡಿ ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ಹಿಂದುಳಿದಿರುವರಿಗೂ ಸಹಾಯಧನ, ಬಂಡವಾಳ ನೆರವು ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.

ADVERTISEMENT

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿಜೆಪಿಯ ಎಸ್‌.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ‘ಉದ್ಯಮ ಸ್ಥಾಪಿಸಿ, ಉದ್ಯೋಗ ನೀಡುವವರಿಗೆ ಹಲವು ರೀತಿಯ ನೆರವು ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೂ ವಿಸ್ತರಿಸಲಾಗುವುದು’ ಎಂದರು.

ಆರ್ಥಿಕವಾಗಿ ಹಿಂದುಳಿದವರಿಗೆ ಕೈಗಾರಿಕೆಗಳ ಸ್ಥಾಪನೆಗೆ ನೆರವು ನೀಡುವುದಕ್ಕೆ ವರ್ಷಕ್ಕೆ ₹ 120 ಕೋಟಿಯಷ್ಟು ಹೊರೆ ಬೀಳಲಿದೆ. ಈ ಕುರಿತ ಪ್ರಸ್ತಾವ ಈಗಾಗಲೇ ಆರ್ಥಿಕ ಇಲಾಖೆಯ ಮುಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.