ADVERTISEMENT

ಬೆಳಗಾವಿ: ತಗ್ಗಿದ ಅಬ್ಬರ, ಮಲಪ್ರಭಾ, ಘಟಪ್ರಭಾ ಒಳಹರಿವು ಇಳಿಮುಖ

ಮನೆ ಬಿದ್ದು ವೃದ್ಧ ಸಾವು; ಮತ್ತೆ 2 ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 9:59 IST
Last Updated 19 ಆಗಸ್ಟ್ 2020, 9:59 IST
ಖಾನಾಪುರ ಅರಣ್ಯದಲ್ಲಿ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ
ಖಾನಾಪುರ ಅರಣ್ಯದಲ್ಲಿ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ   

ಬೆಳಗಾವಿ: ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒಳಹರಿವು ಕಡಿಮೆಯಾಗಿದೆ. ಮಲಪ್ರಭಾ ಒಳಹರಿವು 17,719 ಕ್ಯುಸೆಕ್‌ಗೆ ಇಳಿದಿದ್ದರೆ, ಘಟಪ್ರಭಾ ಒಳಹರಿವು 34,308 ಕ್ಯುಸೆಕ್‌ಗೆ ಇಳಿದಿದೆ. ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.

ಚಿಕ್ಕೋಡಿ ತಾಲ್ಲೂಕಿನ ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಯಕ್ಸಂಬಾ– ದಾನವಾಡ ಹಾಗೂ ಸದಲಗಾ– ಬೋರಗಾಂವ ಸೇತುವೆಗಳು ಜಲಾವೃತವಾಗಿವೆ. ಇದರೊಂದಿಗೆ, ಜಿಲ್ಲೆಯಲ್ಲಿ ಇದುವರೆಗೆ ಜಲಾವೃತವಾದ ಸೇತುವೆಗಳ ಸಂಖ್ಯೆ 10ಕ್ಕೆ ಏರಿದೆ. ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ಮಣ್ಣಿನ ಮನೆಯೊಂದು ಕುಸಿದುಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗಿನಜಾವ ಮನೆಯಲ್ಲಿ ಮಲಗಿದ್ದ ಕಲ್ಲಪ್ಪ ಪರಗೌಡರ (70) ಸಾವಿಗೀಡಾಗಿದ್ದಾರೆ.

ADVERTISEMENT

ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇನ್ನೂ ಏರುಗತಿಯಲ್ಲಿಯೇ ಇದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮೂಲಕ 1.88 ಲಕ್ಷ ಕ್ಯುಸೆಕ್‌ ನೀರು ಹಾಗೂ ದೂಧ್‌ಗಂಗಾ ಮೂಲಕ 33,440 ಕ್ಯುಸೆಕ್‌ ನೀರು ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ 2.21 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.