ADVERTISEMENT

ಬೆಳಗಾವಿ: ಸ್ವಾಮೀಜಿ, ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಹೋರಾಟ ಅಂತ್ಯ, ಹೆದ್ದಾರಿ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 11:36 IST
Last Updated 10 ಡಿಸೆಂಬರ್ 2024, 11:36 IST
   

ಬೆಳಗಾವಿ: ಮೀಸಲಾತಿಗೆ ಆಗ್ರಹಿಸಿ ಇಲ್ಲಿ‌ನ ರಾಷ್ಟ್ರೀಯ ಹೆದ್ದಾರಿ ಮೇಲೆ ಧರಣಿ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಈರಣ್ಣ ಕಡಾಡಿ ಮುಂತಾದವರನ್ನು ಪೊಲೀಸರು ವಾಹನದಲ್ಲಿ ಹತ್ತಿಸಿಕೊಂಡು ಬೇರೆಡೆ ಕರೆದೊಯ್ದರು.

ಬಳಿಕವೂ ಸಮಾಜದ ವಕೀಲರು, ರಾಜಕಾರಣಿಗಳು, ಕಾರ್ಯಕರ್ತರು ಹೋರಾಟ ಮುಂದುವರಿಸಿದ್ದರು. ಅವರನ್ನು ಗುಂಪು ಗುಂಪಾಗಿ ಚದುರಿಸಿದ ಪೊಲೀಸರು ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿದರು.

ಇದಕ್ಕೂ ಮುನ್ನ 'ಪ್ರಜಾವಾಣಿ' ಜತೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ' ಸಮಾಜ ಬಾಂಧವರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ಅಮಾಯಕರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದು ಬ್ರಿಟಿಷ್ ಸರ್ಕಾರ. ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲಾಗಿದೆ. ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ಸಂವಿಧಾನಕ್ಕೆ ಮಾಡಿದ ಅಪಮಾನ. ನಮ್ಮ ಹೋರಾಟದ ಶಕ್ತಿ ಕುಂದಿಸಲು ಸಾಧ್ಯವಿಲ್ಲ'ಎಂದರು.

ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, 'ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರದಲ್ಲಿರುವ ನಮ್ಮದೇ ಸಮಾಜದ ಕೆಲ ಕಿಡಿಗೇಡಿಗಳು ಮಾಡಿಸಿದ ಕೆಲಸವಿದು. ಮುಂದಿನ ಹೋರಾಟದ ಬಗ್ಗೆ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ' ಎಂದರು.

'ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಸಾಮಾನ್ಯ ಜನರ ಮೇಲೂ ಲಾಠಿ ಬೀಸಿದ್ದಾರೆ. ಆ ಮೂಲಕ ಜನರ ಶಾಪಕ್ಕೆ ಈ ಸರ್ಕಾರ ಗುರಿಯಾಗಿದೆ. ಇನ್ಮುಂದೆ ರಾಜ್ಯಾಧ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ' ಎಂದು ವಿಧಾನಸಭೆ ಉಪ ನಾಯಕ ಅರವಿಂದ ಪಾಟೀಲ ಆಕ್ರೋಶ ಹೊರಹಾಕಿದರು.

'ಮುಖ್ಯಮಂತ್ರಿಗಳ ಭೇಟಿಗೆ ಶಾಂತಿಯುತವಾಗಿ ಹೋಗುತ್ತಿದ್ದ ನಮ್ಮವರ ಮೇಲೆ ಇವತ್ತು ಲಾಠಿ ಚಾರ್ಜ್ ಮಾಡುವ ಕೆಟ್ಟ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಇದೊಂದು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾರದ ಘಟನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.