ADVERTISEMENT

ಬೆಳಗಾವಿ: ಬಿಮ್ಸ್ ಅಧಿಕಾರಿಗಳೊಂದಿಗೆ ಸೋಂಕಿತರ ವಾಗ್ವಾದ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 9:10 IST
Last Updated 12 ಜೂನ್ 2020, 9:10 IST
ಬಿಮ್ಸ್ ಆಸ್ಪತ್ರೆ ಬೆಳಗಾವಿ
ಬಿಮ್ಸ್ ಆಸ್ಪತ್ರೆ ಬೆಳಗಾವಿ   

ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಸೋಂಕಿತರು ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂಲಗಳ ಪ್ರಕಾರ, ಘಟನೆಯು ಗುರುವಾರ ನಡೆದಿದೆ ಎಂದು ಗೊತ್ತಾಗಿದೆ. ಎರಡು ವಿಡಿಯೊಗಳು ವಾಟ್ಸ್ ಆ್ಯಪಲ್ಲಿ ಹರಿದಾಡುತ್ತಿವೆ. ಸೋಂಕಿತರೇ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಮಹಿಳೆ ಒಬ್ಬರ ದನಿಯೂ ವಿಡಿಯೊದಲ್ಲಿ ಕೇಳಿಸುತ್ತದೆ.

ಡಾ.ವಿನಯ್ ಜೊತೆ ಚರ್ಚಿಸುವಾಗ ಸೋಂಕಿತರು, ‘ನಮಗೆ ಇಂಟರ್ನಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಹೆಸರು ಕೇಳಿದರೆ ಹೇಳುವುದಿಲ್ಲ. ನಮಗೆ ಚಿಕಿತ್ಸೆ ನೀಡುತ್ತಿರುವವರ ಹೆಸರುಗಳನ್ನು ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರತಿಕ್ರಿಯಿಸುವ ದಾಸ್ತಿಕೊಪ್ಪ, ‘ಚಿಕಿತ್ಸೆ ನೀಡುವವರ ಹೆಸರುಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಹೆಸರು ಹೇಳದಂತೆ ನಾವೇ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಅಲ್ಲದೇ ಅರ್ಹರಲ್ಲದವರನ್ನು ಚಿಕಿತ್ಸೆಗೆ ನಿಯೋಜಿಸಿಲ್ಲ. ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿವರೆಗೆ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಇಂಟರ್ನಿಗಳು ಗಂಟಲು ದ್ರವದ ಮಾದರಿ ಸಂಗ್ರಹಿಸುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವರು ಸಹಕಾರವನ್ನಷ್ಟೆ ನೀಡುತ್ತಾರೆ. ಇಎನ್‌ಟಿ ವಿಭಾಗದ ತಜ್ಞರು ಮಾದರಿ ಸಂಗ್ರಹಿಸುತ್ತಾರೆ’ ಎಂದು ತಿಳಿಸುವುದು ವಿಡಿಯೊದಲ್ಲಿದೆ.

‘ವೈದ್ಯಕೀಯ ಸಿಬ್ಬಂದಿಯನ್ನು ಏಳು ದಿನಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಕೋವಿಡ್-19 ಚಿಕಿತ್ಸೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.