ADVERTISEMENT

ಸಭಾಧ್ಯಕ್ಷರಿಗೆ ಕಾದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
   

ಬೆಳಗಾವಿ: ವಿಧಾನಸಭೆಯಲ್ಲಿ ಬುಧವಾರ ಮಧ್ಯಾಹ್ನದ ಕಲಾಪ ಸುಮಾರು 45 ನಿಮಿಷ ತಡವಾಗಿ ಆರಂಭಗೊಂಡಿತು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್ ಅವರಿಗಾಗಿ ಸದಸ್ಯರು ಕಾದರು.

ಮಧ್ಯಾಹ್ನದ ಕಲಾಪ 3ಕ್ಕೆ ಆರಂಭವಾಗಲಿದೆ ಎಂದು ರಮೇಶ್‌ ಕುಮಾರ್‌ ಪ್ರಕಟಿಸಿದ್ದರು. ಆ ವೇಳೆಗೆ, ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿಯ 20 ಶಾಸಕರು ಸದನಕ್ಕೆ ಬಂದರು. ಆಡಳಿತ ಪಕ್ಷದ ಸಾಲಿನಲ್ಲಿ ಎ.ಟಿ.ರಾಮಸ್ವಾಮಿ ಅವರೊಬ್ಬರೇ ಇದ್ದರು. ಬೆಲ್‌ ಆಗದ ಕಾರಣ ವಿರೋಧ ಪಕ್ಷದ ಮುಖಂಡರು ಮಾತುಕತೆಯಲ್ಲಿ ತೊಡಗಿದರು. ಸುಮಾರು 15 ನಿಮಿಷ ಹಾಗೆಯೇ ಕಳೆಯಿತು. ಬೆಲ್‌ ಹೊಡೆಯದೆ ಇದ್ದುದನ್ನು ಗಮನಿಸಿದ ಶಾಸಕ ಆರ್.ಅಶೋಕ, ’ಇವತ್ತು ಕಲಾಪ ಇದೆಯೇನಪ್ಪ‘ ಎಂದು ಕಾರ್ಯದರ್ಶಿ ಎಸ್‌.ಮೂರ್ತಿ ಅವರನ್ನು ಪ್ರಶ್ನಿಸಿದರು. ’ನಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ. ಉಳಿದದ್ದು ನನಗೆ ಗೊತ್ತಿಲ್ಲ‘ ಎಂದು ಅವರು ಮಗುಮ್ಮಾಗಿ ಹೇಳಿದರು. ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರು ಇಬ್ಬರೂ ಇಲ್ಲವೇ ಎಂದೂ ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರು. ಇದ್ದ ಹಾಗಿಲ್ಲ ಎಂದು ಸಚಿವಾಲಯದ ನೌಕರರು ಉತ್ತರಿಸಿದರು. ಸಭಾಧ್ಯಕ್ಷರು ಇಲ್ಲದ ವೇಳೆ ಕಲಾಪ ನಡೆಸುವ ಶಾಸಕರು ಯಾರಾದರೂ ಇದ್ದಾರಾ ಎಂದೂ ಮೂರ್ತಿ ಹುಡುಕಿದರು. ಅವರೂ ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಬೆಲ್‌ ಹೊಡೆಯಲು ಶುರುವಾಯಿತು. 3.40ರ ವೇಳೆಗೆ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಬಂದು ತಮ್ಮ ಆಸೀನದಲ್ಲಿ ಕುಳಿತುಕೊಂಡರು. ಸ್ಪೀಕರ್ ಇಲ್ಲದ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದರು. ಬಳಿಕ ಕಲಾಪ ಆರಂಭಿಸಿದರು.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ’ಇವತ್ತು ಏಕೆ ಬೆಲ್‌ ಹೊಡೆದುಕೊಳ್ಳಲಿಲ್ಲ. ಸರ್ಕಾರಕ್ಕೆ ಏನಾದರೂ ತೊಂದರೆ ಆಗಿದೆಯಾ‘ ಎಂದು ವ್ಯಂಗ್ಯವಾಗಿ ಕೇಳಿದರು. ’10 ನಿಮಿಷವಷ್ಟೇ ತಡವಾಗಿದೆ. ಈ ವಿಷಯದ ಬಗ್ಗೆ ಮಾತನಾಡಿ ಇನ್ನಷ್ಟು ವಿಳಂಬ ಮಾಡುವುದು ಬೇಡ‘ ಎಂದು ಕೃಷ್ಣಾ ರೆಡ್ಡಿ ಪ್ರತಿಕ್ರಿಯಿಸಿದರು.

ADVERTISEMENT

ಕಾನೂನು ಸಚಿವ ಕೃಷ್ಣ ಬೈರೇಗೌಡ, ’ವಿರೋಧ ಪಕ್ಷದವರು ಸೂಕ್ಷ್ಮಮತಿಗಳಾಗಿದ್ದಾರೆ. ನಾವು ಪ್ರಗತಿಯಲ್ಲಿ ಇದ್ದೇವೆ ಎಂದರ್ಥ‘ ಎಂದರು. ’ಸರ್ಕಾರ ಸೋಂಬೇರಿಯಾಗಿದೆ. ಎದ್ದೇಳಿ ಎಂದು ನಾವು ಬಡಿದೆಬ್ಬಿಸುತ್ತಿದ್ದೇವೆ‘ ಎಂದು ಆರ್‌.ಅಶೋಕ ತಿರುಗೇಟು ನೀಡಿದರು.

’ಬಿಜೆಪಿ ಅವಧಿಯಲ್ಲಿ ವರ್ಷದ 35 ದಿನಗಳಷ್ಟೇ ಕಲಾಪ ನಡೆಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 58 ದಿನಗಳು ಕಲಾಪ ಆಗಿದೆ. ನಮ್ಮ ನಡವಳಿಕೆಯಿಂದ ಸದನದ ಗುಣಮಟ್ಟ ವೃದ್ಧಿಸಿದೆ‘ ಎಂದು ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದರು.

ಆಗ ಸದನಕ್ಕೆ ಬಂದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ’ಎರಡು ದಿನ ಬಹಳ ಚೆನ್ನಾಗಿ ಕಲಾಪ ನಡೆದಿದೆ. ವಿರೋಧ ಪಕ್ಷದವರಿಗೆ ಏನು ಬೇಕಾದರೂ ಬೇಗ ಮಾಡಿಕೊಡಿ‘ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.